ಟೈಟಲ್ ಮೂಲಕವೇ ಕೆಲವೊಂದು ಸಿನಿಮಾಗಳು ಮೊದಲ ಹಂತದಲ್ಲೇ ತನ್ನತ್ತ ಸೆಳೆದು ಬಿಡುತ್ತವೆ. ಟೈಟಲ್ ಹಾಡುಗಳು ಒಂದು ರೀತಿ ಸಿನಿಮಾಗೆ ಆಮಂತ್ರಣವಿದ್ದಂತೆ ಅದೇ ರೀತಿ ಚಂದನವನದಲ್ಲಿ ಟೈಟಲ್ ಮೂಲಕವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕಡಲ ತೀರದ ಭಾರ್ಗವ ಸಿನಿಮಾ. ಈಗಾಗಲೇ ಖಡಕ್ ಹಾಗೂ ರೋಚಕ ಟೀಸರ್ ಮೂಲಕ ಚಿತ್ರ ರಸಿಕರನ್ನು ಸೆಳೆದಿರುವ ಈ ಚಿತ್ರ ಹಾಡಿನ ಮೂಲಕ ಸೆಳೆಯೋಕೆ ಶುರುಮಾಡಿದೆ.
ಕಡಲ ತೀರದ ಭಾರ್ಗವ ಸಿನಿಮಾ ಸೆಟ್ಟೇರಿದಾಗ ಒಂದು ರೀತಿಯ ಸಂಚಲನ ಸೃಷ್ಟಿಸಿತ್ತು. ಇದೇನು ಕಾರಂತರ ಜೀವನಗಾಥೆಯಾ ಎಂದು ಆದರೆ ಪೋಸ್ಟರ್ ನೋಡಿದ ಮೇಲೆ ಇದು ಪ್ರೇಮಕಥೆ ಎನ್ನುವುದು ತಿಳಿಯಿತು. ಅಲ್ಲಿಂದ ಇಲ್ಲಿಯವರೆಗೂ ಸಿನಿಮಾದ ಪೋಸ್ಟರ್, ಟೀಸರ್ ಒಳಗೊಂಡಂತೆ ಸುದ್ದಿಯಾಗುತ್ತಲೇ ಬಂದ ಈ ಸಿನಿಮಾ ಈಗ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಚಿತ್ರದ ಒಂದೊಂದೇ ಸ್ಯಾಂಪಲ್‍ಗಳ ಮೂಲಕ ಚಿತ್ರ ಪ್ರೇಮಿಗಳ ಚಿತ್ತ ಕದಿಯುತ್ತ ಬಂದಿರುವ ಚಿತ್ರತಂಡವೀಗ ಚಿತ್ರದ ಮೊದಲ ಸಾಂಗ್ ‘ಸಮಯವೇ’ ಎಂಬ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆ ಮಾಡಿ ಗಮನ ಸೆಳೆಯುತ್ತಿದೆ.
ಮೊದಲೇ ಹೇಳಿದಂತೆ ಹಾಡುಗಳು ಚಿತ್ರಕ್ಕೆ ಒಂದು ರೀತಿ ಆಮಂತ್ರಣ ಪತ್ರವಿದ್ದಂತೆ. ಹಾಡುಗಳು ಮನಸ್ಸಿಗಿಷ್ಟವಾದರೆ ಸಾಕು ಸಿನಿಮಾ ನೋಡಲು ಪ್ರೇರೇಪಿಸುತ್ತೆ. ಅದೇ ನಿಟ್ಟಿನಲ್ಲಿ ಚೆಂದವಾಗಿ ಕಟ್ಟಿಕೊಟ್ಟ ಹಾಡು ‘ಸಮಯವೇ’. ಅನಿಲ್ ಸಿ ಜೆ ಮ್ಯೂಸಿಕ್ ಮೋಡಿಯಲ್ಲಿ, ವಿಜಯ್ ಪ್ರಕಾಶ್ ದನಿಯ ಮ್ಯಾಜಿಕ್‍ನಲ್ಲಿ ಮೂಡಿ ಬಂದಿರುವ ಈ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಕೃಷಿಯಿದೆ. ಸದ್ಯಕ್ಕಂತೂ ಎಲ್ಲರನ್ನೂ ಈ ಹಾಡು ಕಾಡಲು ಶುರುಮಾಡಿದೆ. ಇದನ್ನೂ ಓದಿ: ಖಡಕ್ ಟ್ರೇಲರ್ ನೊಂದಿಗೆ ಬಂದ ಕಡಲ ತೀರದ ಭಾರ್ಗವ!
ಪನ್ನಗ ಸೋಮಶೇಖರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರದ ಮೂಲಕ ಭರತ್ ಗೌಡ, ವರುಣ್ ರಾಜು ಇಬ್ಬರು ಪ್ರತಿಭಾವಂತ ನಾಯಕ ನಟರು ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಡುತ್ತಿದ್ದು, ಚಿತ್ರದಲ್ಲಿ ಶ್ರುತಿ ಪ್ರಕಾಶ್ ನಾಯಕ ನಟಿಯಾಗಿ ನಟಿಸಿದ್ದಾರೆ. ಇದನ್ನೂ ಓದಿ: ರೋಚಕ ಟೀಸರ್ ಹೊತ್ತು ಬಂದ ‘ಕಡಲ ತೀರದ ಭಾರ್ಗವ’ ಚಿತ್ರತಂಡ
ಸಸ್ಪೆನ್ಸ್, ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರವನ್ನು ಇವಕಲ ಸ್ಟುಡಿಯೋ ಬ್ಯಾನರ್ ನಡಿ ಚಿತ್ರದ ನಾಯಕ ನಟರಾದ ಭರತ್ ಗೌಡ, ವರುಣ್ ರಾಜು ನಿರ್ಮಾಣ ಮಾಡಿದ್ದು, ಶ್ರೀಧರ್, ರಾಘವ್ ನಾಗ್, ಅಶ್ವಿನ್ ಹಾಸನ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕೀರ್ತನ್ ಪೂಜಾರ್ ಛಾಯಾಗ್ರಹಣ, ಆಶಿಕ್ ಕುಸುಗೊಳ್ಳಿ, ಉಮೇಶ್ ಬೋಸಗಿ ಸಂಕಲನ ಚಿತ್ರಕ್ಕಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ ಸದ್ಯದಲ್ಲೇ ಸಿನಿಮಾ ಬಿಡುಗಡೆ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ.