ಕನ್ನಡದಲ್ಲಿ ಹೊಸಬರ ಆಗಮನದಿಂದ ಹೊಸತನವೆದ್ದಿದೆ. ಯುವ ಸಿನಿಮೋತ್ಸಾಹಿಗಳು ಹೊಸ ಬಗೆಯ ಕಥಾಹಂದರ ಮೂಲಕ ಪ್ರೇಕ್ಷಕರ ಎದುರು ಹಾಜರಾಗುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಸಿನಿಮಾವೇ ಕಾದಲ್.
ಪ್ರೀತಿ, ಪ್ರೇಮ, ಪ್ರಯಣದ ಸುತ್ತ ಸಾಗುವ ಸಾಕಷ್ಟು ಸಿನಿಮಾಗಳು ಕನ್ನಡದಲ್ಲಿ ಬಂದು ಹೋಗಿವೆ. ಬರುತ್ತಲೇ ಇದೆ. ಆದರೆ ಭಾವನೆಗಳ ಭಾಷೆಗೆ ಮೌನವೆಂಬ ಲಿಪಿಯೇ ಪ್ರೇಮಿ ಎಂಬ ಆಶಯ ಇಟ್ಟುಕೊಂಡು ಪ್ರೀತಿ ಪ್ರೇಮ ಜಗತ್ತಿನಲ್ಲಿ ಅತಿ ಶ್ರೇಷ್ಠವಾದದ್ದು. ಎಲ್ಲರೊಳಗೂ ಹುಟ್ಟಿ ಸಾಯುವ ಭಾವಕೋಶಗಳಿಗೆ ಹೊಸ ಬಗೆಯ ರೂಪ ಕೊಡಲು ಸಜ್ಜಾಗಿದ್ದಾರೆ ನಿರ್ದೇಶಕ ವಿಜಯಪ್ರಿಯಾ. ಇದನ್ನೂ ಓದಿ:‘ಅಡವಿ’ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್ ಮಾಡಿದ ಪಾ.ರಂಜಿತ್
ವಿಜಯಪ್ರಿಯಾ ಚೊಚ್ಚಲ ಹೆಜ್ಜೆ ‘ಕಾದಲ್’ (Kadal Film) ಸಿನಿಮಾ. ವಿಜಯದೀಪ ಪಿಕ್ಚರ್ಸ್ ಮೊದಲ ಕಾಣಿಕೆಯಾಗಿರುವ ಈ ಸಿನಿಮಾದ ಟೈಟಲ್ ಅನಾವರಣ ಕಾರ್ಯಕ್ರಮ ಇತ್ತೀಚೆಗಷ್ಟೇ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೀಚಗೊಂಡನಹಳ್ಳಿ ಗ್ರಾಮದಲ್ಲಿರುವ ಶ್ರೀ ಮಾರುತಿ ದೇಗುಲದಲ್ಲಿ ಹಮ್ಮಿಕೊಳ್ಳಲಾಗಿತ್ತು. ಊರಿನ ಗ್ರಾಮಸ್ಥರು, ಗುರು ಹಿರಿಯರ ಸಮ್ಮುಖದಲ್ಲಿ ಟೈಟಲ್ ಬಿಡುಗಡೆ ಮಾಡಲಾಯಿತು.
ಐದು ಕಥೆ ಐದು ಜನ ನಿರ್ದೇಶಕರ ‘ಪೆಂಟಗನ್’ ಸಿನಿಮಾಗೆ ಒಂದು ಕಥೆ ಬರೆದು ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ, ಕೆಲವೊಂದಿಷ್ಟು ಸಿನಿಮಾಗಳಿಗೆ ಕಥೆ ಬರೆದಿರುವ ವಿಜಯಪ್ರಿಯಾ ‘ಕಾದಲ್’ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿ ಖ್ಯಾತಿಯ ಸುಘ್ರೀವ್ ನಾಯಕನಾಗಿ ನಟಿಸುತ್ತಿದ್ದಾರೆ. ಸಂಜಯ್ ಎಲ್ ಚನ್ನಪ್ಪ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನ, ಹಿತನ್ ಹಾಸನ್ ಸಂಗೀತ, ವಿ. ಗೋಪಿನಾಥ್ ಸಂಭಾಷಣೆ ಚಿತ್ರಕ್ಕಿದೆ. ಭಜರಂಗಿ ಆಶೀರ್ವಾದ ಪಡೆದಿರುವ ಚಿತ್ರತಂಡ ಫೆಬ್ರವರಿ ತಿಂಗಳಲ್ಲಿ ಶೂಟಿಂಗ್ ಅಖಾಡಕ್ಕೆ ಧುಮುಕುವ ಯೋಜನೆ ಹಾಕಿಕೊಂಡಿದೆ. ಮಂಡ್ಯ , ಬೆಂಗಳೂರು, ಹಾಸನ ಭಾಗದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಜ್ಜಾಗುತ್ತಿದೆ.