ಬೆಂಗಳೂರು: ಕಾಂಗ್ರೆಸ್ ಮುಖಂಡ, ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣದಲ್ಲಿ ಇವತ್ತು ಬೆಂಗಳೂರಿನ ಅಂಡರ್ ವರ್ಲ್ಡ್ ಗಢಗಢ ನಡುಗಿದೆ.
ಈಗಾಗಲೇ ಪೊಲೀಸರ ವಶದಲ್ಲಿರುವ ಬಿಜೆಪಿ ಶಾಸಕರ ಬಲಗೈ ಬಂಟ ಸತೀಶ್ ನೀಡಿದ ಮಾಹಿತಿ ಮೇರೆಗೆ ಇವತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್ ಅವರ ಇಸ್ರೋ ಲೇಔಟ್ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ
ಐವರು ಡಿಸಿಪಿಗಳ ತಂಡ ದಾಳಿ ನಡೆಸಿ ರೌಡಿ ಒಂಟೆ ರೋಹಿತ್, ಸೈಲೆಂಟ್ ಸುನೀಲ ಸೇರಿದಂತೆ ಕೆಲ ಆರೋಪಿಗಳನ್ನು ಹುಡುಕಾಡಿದೆ. ಪೊಲೀಸ್ ದಾಳಿ ವೇಳೆ ಅಗ್ನಿ ಶ್ರೀಧರ್ ಮಧ್ಯಾಹ್ನ 3.30ರ ವೇಳೆಗೆ ಲಘು ಹೃದಯಾಘಾತವಾಗಿದ್ದು ಆಂಬುಲೆನ್ಸ್‍ನಲ್ಲೇ ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಚ್ಚನ್ ಸೇರಿದಂತೆ ಪೊಲೀಸರು 7 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ.
ದಾಳಿ ಹೇಗಾಯ್ತು?
ಟಾಟಾ ರಮೇಶ್ ಹಾಗೂ ಕಡಬಗೆರೆ ಶ್ರೀನಿವಾಸ್‍ಗೆ ಒಂಟೆ ರೋಹಿತ್, ಸೈಲೆಂಟ್ ಸುನೀಲ ಬೆದರಿಕೆ ಹಾಕಿದ್ದರು. ಇವರಿಬ್ಬರ ಮೊಬೈಲ್ ಟವರ್ ಲೊಕೇಶನ್ ಬೆನ್ನತ್ತಿದ್ದಾಗ ಇಬ್ಬರು ಪತ್ರಕರ್ತ ಅಗ್ನಿ ಶ್ರೀಧರ್ ಮನೆಯಲ್ಲಿದ್ದಾರೆ ಎನ್ನುವ ಶಂಕೆ ಆಧಾರದಲ್ಲಿ ದಾಳಿ ನಡೆಸಲಾಯಿತು.
ತಕ್ಷಣ ಸರ್ಚ್ ವಾರೆಂಟ್ ಪಡೆದು ಐವರು ಡಿಸಿಪಿಗಳ ತಂಡದಿಂದ ಏಕಕಾಲಕ್ಕೆ ದಾಳಿ ನಡೆಯುತ್ತದೆ. ಸರ್ಚ್ ವಾರೆಂಟ್ ಇಲ್ಲದ ಕಾರಣ 10 ನಿಮಿಷ ಗೇಟ್ ಮುಂದೆ ಪೊಲೀಸರನ್ನು ಅಗ್ನಿ ಶ್ರೀಧರ್ ನಿಲ್ಲಿಸುತ್ತಾರೆ. ಈ ವೇಳೆ ಅಗ್ನಿ ಶ್ರೀಧರ್ ಮನೆಯಲ್ಲಿದ್ದ 10ಕ್ಕೂ ಹೆಚ್ಚು ಯುವಕರನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆ.
ದಾಳಿ ವೇಳೆ ಮನೆಯಲ್ಲಿ ಲೈಸೆನ್ಸ್ ಇಲ್ಲದ ಗನ್, ಮಾರಕಾಸ್ತ್ರಗಳು ಹಾಗೂ 70 ವಿದೇಶಿ ಮದ್ಯದ ಬಾಟಲ್‍ಗಳು, ಗಾಂಜಾ ಹಾಗೂ ಚಿನ್ನಾಭರಣ ಪತ್ತೆಯಾಗಿದೆ. ಈ ಸಂಬಂಧ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಕಾಯ್ದೆಯಡಿ ಅಗ್ನಿ ಶ್ರೀಧರ್ ಮೇಲೆ ಎಫ್‍ಐಆರ್ ದಾಖಲಾಗಿದೆ.
ಅಗ್ನಿ ಶ್ರೀಧರ್ ಆಪ್ತ, ಭೂಗತಪಾತಕಿ ಚೋಟಾ ರಾಜನ್ ಸಹಚರನಾಗಿದ್ದ ಅಮಾನ್ ಅಲಿಯಾಸ್ ಸೈಯದ್ ಅಮಾನುಲ್ಲಾ ಬಚ್ಚನ್ ನನ್ನು ಪೊಲೀಸರು ಬಂಧಿಸಿದ್ದಾರೆ. ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಅಗ್ನಿ ಶ್ರೀಧರ್ ನೋಡಲು ಬಂದ ವೇಳೆ ರಾತ್ರಿ 8.30ರ ವೇಳೆ ಸೈಲೆಂಟ್ ಸುನೀಲನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೈಲೆಂಟ್ ಸುನೀಲನ ಗಾಯತ್ರಿನಗರ, ಪ್ರಕಾಶ್ ನಗರ, ಕುಮಾರಸ್ವಾಮಿ ಲೇಔಟ್‍ನ ಮನೆಗಳ ಮೇಲೆ ಪೊಲೀಸರು ಶೋಧ ನಡೆಸಿದ್ದರು.