ಬಳ್ಳಾರಿ: ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಕಬ್ಜಾ’ ಸಿನಿಮಾ 7 ಭಾಷೆಗಳಲ್ಲಿ ಬರುತ್ತಿದ್ದು, ರಾಜ್ಯದ ಜನರಷ್ಟೇ ಅಲ್ಲ ಇಡೀ ದೇಶದ ಜನರು ಈ ಸಿನಿಮಾವನ್ನು ಮೆಚ್ಚುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ನಿರ್ದೇಶಕ ಆರ್. ಚಂದ್ರು ಹೇಳಿದ್ದಾರೆ.
ಸಿನಿಮಾ ಪ್ರಮೋಶನ್‍ಗಾಗಿ ಬಳ್ಳಾರಿಗೆ ಬಂದಿದ್ದ ನಿರ್ದೇಶಕ ಆರ್. ಚಂದ್ರು ಸುದ್ದಿಗಾರರೊಂದಿಗೆ ಮಾತನಾಡಿ, ಸ್ಥಳೀಯ ಕಲಾವಿದರಿಗೆ ಹೆಚ್ಚು ಅವಕಾಶವನ್ನು ನೀಡುವ ಮೂಲಕ ಸಾಕಷ್ಟು ವಿಭಿನ್ನ ರೀತಿಯಲ್ಲಿ ಸಿನಿಮಾವನ್ನು ಮಾಡಲಾಗಿದೆ. ಅಲ್ಲದೇ ಬಳ್ಳಾರಿ ಮೂಲದ ಕೌಶಿಕ್ ಎನ್ನುವ ಕಲಾವಿದ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟನೆ ಮಾಡಿದ್ದಾನೆ. ಸಿನಿಮಾದಲ್ಲಿ ಉಪೇಂದ್ರ ಅವರ ಜೊತೆ ಸಾಥ್ ನೀಡಿರೋ ಕೌಶಿಕ್ ಮುಂದೆ ಸಿನಿಮಾ ರಂಗದಲ್ಲಿ ಮತ್ತಷ್ಟು ಅವಕಾಶಗಳು ಬರಲಿವೆ ಎಂದರು.
ಇನ್ನೂ ದ್ವಾರಕೀಶ್ ಅವರ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡಿದ ಅವರು, ಸಿನಿಮಾ ಎಂದರೇನೇ ವ್ಯಾಪಾರ. ಇಲ್ಲಿ ಏಳು ಬೀಳು ಸಹಜ. ಅವರವರೇ, ಕುಳಿತುಕೊಂಡು ಮಾತನಾಡುತ್ತಾರೆ ಎಂದರು. ಹೀಗಿರುವ ಸಮಸ್ಯೆ ಮುಂದಿನ ಸಿನಿಮಾ ಮಾಡುವುದರೊಳಗೆ ಸರಿ ಹೋಗುತ್ತದೆ. ಸಿನಿಮಾ ಎನ್ನುವುದು ವ್ಯಾಪಾರ. ಯಾರು ಕೂಡ ಧರ್ಮಕ್ಕೆ ಸಿನಿಮಾ ಮಾಡಲ್ಲ. ಮುಂದೆ ಎಲ್ಲ ಸರಿ ಹೋಗುತ್ತದೆ ಎಂದು ಪ್ರತಿಕ್ರಿಯಿಸಿದರು.