ಬೆಂಗಳೂರು: ರಾಜ್ ಪತ್ತಿಪಾಟಿ ನಿರ್ದೇಶನದ ಕಾಣದಂತೆ ಮಾಯವಾದನು ಚಿತ್ರವೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ಒಂದಷ್ಟು ಕಾಲ ಯಾವ ಸುದ್ದಿಯೂ ಇಲ್ಲದಂತಿದ್ದ ಈ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದ್ದ ಕ್ಯಾರೆಕ್ಟರ್ ಪ್ರೋಮೋ ಮೂಲಕ ಮತ್ತೆ ಚರ್ಚೆಗೆ ಕಾರಣವಾಗಿತ್ತು. ಈ ಮೂಲಕವೇ ತನ್ನ ತಾರಾಗಣವನ್ನು ಪರಿಚಯಿಸಿದ್ದ ಚಿತ್ರತಂಡವೀಗ ಟ್ರೈಲರ್ ಮೂಲಕ ಇಡೀ ಸಿನಿಮಾದ ಆಂತರ್ಯವನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದೆ.
ಕಾಣದಂತೆ ಮಾಯವಾದನು ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ವರ್ಷಾಂತರದಿಂದಲೂ ಸುದ್ದಿಯಾಗುತ್ತಾ ಸಾಗುತ್ತಿದ್ದ ಈ ಚಿತ್ರ ಯಾವ ಜಾನರಿನದ್ದು, ಇದರ ಕಥೆಯೇನು ಅಂತೆಲ್ಲ ಜನರಲ್ಲಿ ನಾನಾ ಪ್ರಶ್ನೆಗಳಿದ್ದವು. ಅದಕ್ಕೆ ಉತ್ತರಿಸುತ್ತಲೇ ಪ್ರೇಕ್ಷಕರ ನಿರೀಕ್ಷೆಯ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ರೀತಿಯಲ್ಲಿ ಈ ಟ್ರೈಲರ್ ಮೂಡಿ ಬಂದಿದೆ.
Advertisement
Advertisement
ಹಾರರ್ ಕಥೆಗಳೆಂದರೆ ದೆವ್ವ, ಪ್ರೇತಗಳ ಮೂಲಕ ಭೀತಗೊಳಿಸೋದು ಎಂಬಂಥಾ ಕಲ್ಪನೆಯಿದೆ. ಆದರೆ ಅದಕ್ಕೆ ತದ್ವಿರುದ್ಧ ರೀತಿಯಲ್ಲಿ, ಹೊಸತನದೊಂದಿಗೆ ಈ ಸಿನಿಮಾ ಮೂಡಿಬಂದಿದೆ ಅನ್ನೋದಕ್ಕೂ ಟ್ರೈಲರ್ ಸಾಕ್ಷಿಯಂತಿದೆ. ಈ ಹಿಂದೆ ಜಯಮ್ಮನ ಮಗ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿಕಾಸ್ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಅವರಿಲ್ಲಿ ಪಕ್ಕಾ ಆಕ್ಷನ್ ಹೀರೋ ಆಗಿ ವಿಜೃಭಿಸಿರೋ ಸ್ಪಷ್ಟ ಸೂಚನೆಯನ್ನೂ ಈ ಟ್ರೈಲರ್ ನೀಡಿದೆ.
Advertisement
Advertisement
ಹಾರರ್ ಕಂಟೆಂಟಿದೆಯಾದರೂ ಇದು ಮಾಮೂಲಿ ಶೈಲಿಯ ಚಿತ್ರವಲ್ಲ. ಇಲ್ಲಿರೋ ಆತ್ಮ ಬದುಕಿರೋ ಘಳಿಗೆಯಲ್ಲಿ ಜೀವದಂತಿದ್ದ ಪ್ರೀತಿಯ ಕಾವಲಿಗೆ ನಿಲ್ಲುತ್ತಲೇ ಸೇಡು ತೀರಿಸಿಕೊಳ್ಳೋ ಕಥೆಯ ಹೊಳಹೂ ಕೂಡಾ ಈ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಇದರ ಆಚೀಚೆಗೆ ಥ್ರಿಲ್ಲರ್ ಸ್ಟೋರಿ ಇರುವ ಲಕ್ಷಣಗಳೊಂದಿಗೇ ಮೇಕಿಂಗ್‍ನಲ್ಲಿಯೂ ಈ ಟ್ರೈಲರ್ ಗಮನ ಸೆಳೆಯುವಂತಿದೆ.
ಆಗಾಗ ಸದ್ದು ಮಾಡುತ್ತಾ ಸೈಲೆಂಟಾಗುತ್ತಿದ್ದ ಈ ಚಿತ್ರ ಕೊಂಚ ತಡವಾಗಿದೆ ಎಂಬ ಕಂಪ್ಲೇಂಟು ಪ್ರೇಕ್ಷಕರಲ್ಲಿತ್ತು. ಆದರೆ ಈಗ ಬಿಡುಗಡೆಯಾಗಿರೋ ಟ್ರೈಲರ್ ಆ ಮುನಿಸನ್ನು ಮರೆಯಾಗಿಸಿ ಚಿತ್ರ ಬಿಡುಗಡೆಯಾಗೋದನ್ನ ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡುವಲ್ಲಿಯೂ ಶಕ್ತವಾಗಿದೆ. ಈ ಮೂಲಕ ನಿರ್ದೇಶಕ ರಾಜ್ ಪತ್ತಿಪಾಟಿ ಭರವಸೆ ಹುಟ್ಟಿಸಿದ್ದಾರೆ. ಬಹುಶಃ ಮಾಸ್ತಿಗುಡಿ ದುರಂತದಲ್ಲಿ ಸಾವಿಗೀಡಾಗಿದ್ದ ಅನಿಲ್ ನಟಿಸಿರೋ ಕಡೆಯ ಚಿತ್ರವಿದು. ಈ ಮೂಲಕ ಉದಯ್ ಅವರನ್ನು ಅಬ್ಬರದ ಪಾತ್ರವೊಂದರ ಮೂಲಕ ಕಣ್ತುಂಬಿಕೊಳ್ಳೋ ಸದಾವಕಾಶವೂ ಪ್ರೇಕ್ಷಕರಿಗೆ ಸಿಕ್ಕಿದೆ.
ಒಟ್ಟಾರೆಯಾಗಿ ಈ ಟ್ರೈಲರ್ ಮೂಲಕವೇ ಕಾಣದಂತೆ ಮಾಯವಾದನು ಚಿತ್ರ ಮತ್ತೆ ಜನಮಾನಸ ತಲುಪಿಕೊಂಡಿದೆ. ಬಿಡುಗಡೆಯಾದ ಕ್ಷಣದಿಂದಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಾ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುತ್ತಿದೆ. ಇದನ್ನು ಕಂಡು ಪ್ರೇಕ್ಷಕರು ಅದೆಷ್ಟು ಖುಷಿಗೊಂಡಿದ್ದಾರೆಂಬುದಕ್ಕೆ ಯೂ ಟ್ಯೂಬ್‍ನಲ್ಲಿ ಹರಿದು ಬರುತ್ತಿರೋ ಕಮೆಂಟುಗಳಿಗಿಂತಲೂ ಬೇರೆ ಪುರಾವೆ ಬೇಕಿಲ್ಲ.