ಬೆಂಗಳೂರು: ಈಗ ಕನ್ನಡ ಚಿತ್ರರಂಗದಲ್ಲಿ ಹೊಸಾ ಅಲೆಯ ಚಿತ್ರಗಳ ಹಂಗಾಮ ಶುರುವಾಗಿದೆ. ಶೀರ್ಷಿಕೆ ಕೇಳಿದರೇನೇ ಕುತೂಹಲ ಕೆರಳೋ ಸಿನಿಮಾಗಳೊಂದಿಗೆ ಆಗಮಿಸೋ ಹೊಸಬರ ತಂಡಗಳು ಸ್ಟಾರ್ ಚಿತ್ರಗಳಿಗೇ ಸೆಡ್ಡು ಹೊಡೆಯುವಂಥಾ ಚಿತ್ರದ ಮೂಲಕ ಕಾಲೂರಿ ನಿಂತದ್ದೂ ಇದೆ. ಇದೇ ಥರದ ಪಾಸಿಟಿವ್ ವಾತಾವರಣವನ್ನು ತನ್ನ ಸುತ್ತ ನಿರ್ಮಿಸಿಕೊಂಡಿರೋ ಚಿತ್ರ ಕಾಲವೇ ಮೋಸಗಾರ. ಇದೀಗ ಇದರ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಇದುವೇ ಸದರಿ ಸಿನಿಮಾ ಸುತ್ತಾ ಮತ್ತೊಂದು ಸುತ್ತಿನ ನಿರೀಕ್ಷೆ ಮೂಡಿಕೊಳ್ಳಲು ಕಾರಣವಾಗಿದೆ.
ಇದು ಸಂಜಯ್ ವದತ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ. ಭರತ್ ಸಾಗರ್ ಮತ್ತು ಕಿರುತೆರೆ ನಟಿ ಯಶಸ್ವಿನಿ ರವೀಂದ್ರ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಇಲ್ಲಿ ನಾಯಕ ಭರತ್ ರಗಡ್ ಲುಕ್ಕಿನಲ್ಲಿ ಕಂಗೊಳಿಸಿದರೆ, ನಾಯಕಿ ಕೈಲಿ ರಿವಾಲ್ವರ್ ಹಿಡಿದು ನಿಂತಿರೋ ಶೈಲಿ ಕಥೆಯ ಬಗ್ಗೆ ಕ್ಯೂರಿಯಾಸಿಟಿಗೆ ಕಾರಣವಾಗಿದೆ. ಅಂದಹಾಗೆ ಭಾವಸ್ಪಂದನ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ರಜತ್ ಸಾಳಂಕೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಇದು ಸಸ್ಪೆನ್ಸ್ ಥ್ರಿಲ್ಲರರ್ ಕಥಾ ಹಂದರ ಹೊಂದಿರೋ ಚಿತ್ರ. ಆದರೆ ಇದು ಸಿದ್ಧಸೂತ್ರಗಳಿಗೆ ಬದ್ಧವಾಗಿರೋ ಸಿನಿಮಾವಲ್ಲ. ಶೀರ್ಷಿಕೆ ಮತ್ತು ಪೋಸ್ಟರುಗಳಂಥಾದ್ದೇ ವಿಶಿಷ್ಟವಾದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆಯಂತೆ. ಇದರಲ್ಲಿ ಪ್ರತಿಭಾವಂತರ ತಾಂತ್ರಿಕ ತಂಡ, ದೊಡ್ಡ ತಾರಾಗಳಣವೂ ಇದೆ. ಕೆ ಲೋಕೇಶ್ ಛಾಯಾಗ್ರಹಣ, ರಿತ್ವಿಕ್ ಸಂಕಲನ, ರವೀಂದ್ರ, ಶಂಕರ ಮೂರ್ತಿ, ಕುರಿ ಪ್ರತಾಪ್, ವಿಜಯ್ ಚೆಂಡೂರ್, ಬ್ಯಾಂಕ್ ಜನಾರ್ಧನ್, ದರ್ಶನ್ ವರ್ಣೇಕರ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.