ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ವ್ಯವಸ್ಥೆ ಸರಿಪಡಿಸಲು ಕರ್ನಾಟಕ ಸಿಎಸ್‌ಗೆ ಸೂಚಿಸಿ – ಕೇಂದ್ರಕ್ಕೆ ಡಾ.ಕೆ.ಸುಧಾಕರ್ ಆಗ್ರಹ

Public TV
1 Min Read
K Sudhakar

ನವದೆಹಲಿ: ಕರ್ನಾಟಕದಲ್ಲಿ (Karnataka) ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್ (Congress) ಸರ್ಕಾರ ರೈತರಿಗೆ ಸರಿಯಾಗಿ ರಸಗೊಬ್ಬರ ಪೂರೈಸಿಲ್ಲ. ಆದ್ದರಿಂದ ಕಾಳಸಂತೆಯಲ್ಲಿರುವ ಹಾಗೂ ದಾಸ್ತಾನುಗಳಲ್ಲಿರುವ ರಸಗೊಬ್ಬರವನ್ನು ರೈತರಿಗೆ ತಲುಪುವಂತೆ ಮಾಡಲು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಬೇಕೆಂದು ಸಂಸದ ಡಾ.ಕೆ.ಸುಧಾಕರ್ (K Sudhakar) ಕೇಂದ್ರ ಸರ್ಕಾರಕ್ಕೆ (Central Government) ಆಗ್ರಹಿಸಿದ್ದಾರೆ.

ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಅವರು, ಮುಂಗಾರು ಖಾರಿಫ್ ಋತುಮಾನವು ಕೃಷಿಗೆ ನಿರ್ಣಾಯಕ ಅವಧಿಯಾಗಿದೆ. ಈ ಸಮಯದಲ್ಲಿ ರೈತರು ಭತ್ತ, ಜೋಳ, ನೆಲಗಡಲೆ, ಸೋಯಾಬೀನ್, ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ದುರದೃಷ್ಟವಶಾತ್ ಜಾಗತಿಕ ಮಟ್ಟದಲ್ಲಿ ದೇಶಗಳ ನಡುವೆ ಸಂಘರ್ಷ ನಡೆಯುತ್ತಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 8.13 ಲಕ್ಷ ಟನ್‌ಗಳಷ್ಟು ಯೂರಿಯಾವನ್ನು ಕರ್ನಾಟಕ ರಾಜ್ಯಕ್ಕೆ ಕಳುಹಿಸಿಕೊಟ್ಟಿದೆ.ಇದನ್ನೂ ಓದಿ: ಧರ್ಮಸ್ಥಳ ಫೈಲ್ಸ್‌| ಎರಡನೇ ಜಾಗದಲ್ಲಿ ಸಿಗಲಿಲ್ಲ ಯಾವುದೇ ಕಳೇಬರ

ಭ್ರಷ್ಟಾಚಾರದಲ್ಲಿ ಮುಳುಗಿರುವ, ಸೊರಗಿ ಹೋಗಿರುವ, ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಅಸಮರ್ಪಕ ಆಡಳಿತದಿಂದಾಗಿ ದಾಸ್ತಾನುಗಳಲ್ಲಿರುವ ರಸಗೊಬ್ಬರವನ್ನು ಸರಿಯಾಗಿ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಈ ಮೂಲಕ ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡಿದೆ ಎಂದು ದೂರಿದ್ದಾರೆ.

ಕರ್ನಾಟಕದಲ್ಲಿ 258 ರೂ.ಗೆ ಸಬ್ಸಿಡಿ ದರದಲ್ಲಿ ಯೂರಿಯಾ ಸಿಗಬೇಕಿದ್ದರೂ, ಕಾಳಸಂತೆಯಲ್ಲಿ 500 ರೂ.ಗೆ ದೊರೆಯುತ್ತಿದೆ. ಡಿಎಪಿ 1,200 ರೂ. ಸಿಗಬೇಕಿದ್ದರೂ, 2,000 ರೂ.ಗೆ ಸಿಗುತ್ತಿದೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿಯವರ ನೇತೃತ್ವದಲ್ಲಿ ಎಲ್ಲ ಸಂಸದರು ಹಾಗೂ ರಾಜ್ಯಸಭಾ ಸದಸ್ಯರ ನಿಯೋಗದೊಂದಿಗೆ ರಸಗೊಬ್ಬರ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಈ ಸಮಸ್ಯೆ ಬಗ್ಗೆ ಚರ್ಚಿಸಿದ್ದೇವೆ. ಆದ್ದರಿಂದ ಈಗಾಗಲೇ ಕಾಳಸಂತೆಯಲ್ಲಿರುವ ಹಾಗೂ ದಾಸ್ತಾನುಗಳಲ್ಲಿರುವ ರಸಗೊಬ್ಬರ ಸರಿಯಾದ ದರದಲ್ಲಿ ಸಮರ್ಪಕವಾಗಿ ರೈತರನ್ನು ತಲುಪುವಂತೆ ಮಾಡಬೇಕಿದೆ. ಅದಕ್ಕಾಗಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಸರ್ಕಾರದಿಂದ ಮಾಹಿತಿ ಹಾಗೂ ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಅನುಭವ ಮಂಟಪ ಕಾಮಗಾರಿ ಒಂದು ವರ್ಷದಲ್ಲಿ ಮುಗಿಸಲು ಸಿಎಂ ಸೂಚನೆ – ಈಶ್ವರ್ ಖಂಡ್ರೆ

Share This Article