ಉಡುಪಿ: ಸಾವಿರಾರು ವರ್ಷಗಳಿಂದ ತುಳುನಾಡಿನಲ್ಲಿ ಶ್ರದ್ಧೆ ಭಕ್ತಿಯಿಂದ ದೈವರಾಧನೆ ನಡೆದುಕೊಂಡು ಬಂದಿದೆ. ಪರಕೀಯರಿಂದ ನಮ್ಮ ದೇಶ ಮತ್ತು ಸಂಸ್ಕೃತಿಯ ಮೇಲೆ ನಿರಂತರ ದಾಳಿ ನಡೆದರೂ ದೈವರಾಧನೆ ಸಮೃದ್ಧವಾಗಿ ಉಳಿದಿದೆ. ಇದು ನಮ್ಮ ಸಂಸ್ಕೃತಿ ಮತ್ತು ನೆಲದ ಶಕ್ತಿ ಎಂದು ಚಿಕ್ಕಮಗಳೂರಿನ ವೇದ ವಿಜ್ಞಾನ ಮಂದಿರದ ಕೆ.ಎಸ್ ನಿತ್ಯಾನಂದರು ಹೇಳಿದರು.
ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ತಿಂಗಳೆಯಲ್ಲಿ ನಡೆದ 61 ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಸದ್ಬಳಕೆ ಆಗುವಂತೆ ಶಾಸ್ತ್ರೀಯವಾಗಿ ಅರ್ಥ ಮಾಡಿಕೊಂಡು ಬಳಸಲು ತಂತ್ರಶಾಸ್ತ್ರ ರೂಪು ಗೊಂಡಿದೆ. ಶ್ರದ್ಧೆ ಮತ್ತು ಭಕ್ತಿಯಿಂದ ಉಪಾಸನೆ ಮಾಡಿದವರು ತಂತ್ರವನ್ನು ಸಿದ್ಧಿಸಿಕೊಳ್ಳಬಹುದು. ಆರಾಧನೆಗೆ ಹಲವು ಮುಖಗಳಿವೆ. ಆಗಮದ ಒಂದು ಭಾಗದಲ್ಲಿ ಭೂತಾಯನದ ಉಲ್ಲೇಖವಿದೆ. ಶ್ರದ್ಧೆ, ಭಕ್ತಿಯಿಂದ ಗಳಿಸಿರುವ ಜ್ಞಾನವನ್ನು ಸಮಾಜಕ್ಕೆ ತ್ಯಾಗ ಮಾಡಲು ಹಿರಿಯರು ತಿಳಿಸಿದ್ದಾರೆ ಎಂದರು.
Advertisement
Advertisement
ಸಾಹಿತ್ಯೋತ್ಸವದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಪೂರ್ವಿಕರು ನಡೆಸಿಕೊಂಡು ಬಂದಿರುವ ನೇಮ ಮತ್ತು 61 ವರ್ಷಗಳ ನಿರಂತರ ಸಾಹಿತ್ಯೋತ್ಸವವನ್ನು ಉಳಿಸಿ, ಮುನ್ನಡೆಸುತ್ತಿರುವ ತಿಂಗಳೆ ಮನೆತನಕ್ಕೆ ಅಭಿನಂದನೆಗಳು ಎಂದರು. ದೈವರಾಧನೆಯನ್ನು ನಿರಂತರವಾಗಿ ನಡೆಸಲು ಕಷ್ಟದ ಕಾಲ ಘಟ್ಟದಲ್ಲಿರುವ ಈ ಸಂದರ್ಭದಲ್ಲಿ ಅದರ ಜೊತೆಗೆ ಸಾಹಿತ್ಯೋತ್ಸವವನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸುತ್ತಿರುವುದು ದೊಡ್ಡ ಸಾಹಸ. ಕೃಷಿ ಆಧಾರಿತ ದೈವರಾಧನೆ ನಂಬಿಕೆ, ವಿಶಿಷ್ಟ ಆಚರಣೆಗಳನ್ನು ಸುಲಭವಾಗಿ ಕಂಡು ಕೊಂಡಿದ್ದಾರೆ. ದೇವರು ತಾಯಿ ಸ್ವರೂಪ, ದೈವಗಳು ಮಾವನ ಸ್ವರೂಪ, ತುಳು ಸಾಹಿತ್ಯ, ತುಳು ಭಾಷಾ ಪರಂಪರೆ ಉಳಿದಿರುವುದು ದೈವರಾಧನೆಯಿಂದ ಮಾತ್ರ ಎಂದು ಹೇಳಿದರು.
Advertisement
ಸಾಹಿತ್ಯೋತ್ಸವದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ವಚನ ತಂತ್ರದ ಕುರಿತಾಗಿ ಡಾ. ವೀಣಾ ಬನ್ನಂಜೆ ಮಾತನಾಡಿ, ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳುತ್ತಾನೆ ಜಗ್ಗತ್ತಿನಲ್ಲಿ ಭಿನ್ನ ಭಿನ್ನವಾದ ವಸ್ತುಗಳನ್ನು ಇಟ್ಟಿದ್ದೇನೆ. ಎಲ್ಲಾ ಭಿನ್ನ ವಸ್ತುಗಳೊಳಗೆ ಅಭಿನ್ನವಾದ ನಾನಿದ್ದೇನೆ. ಆ ಅಭಿನ್ನವಾದ ನನ್ನನ್ನು ಗುರುತಿಸಿದ ದಿನ ನೀನು ನನ್ನನ್ನು ಸೇರುತ್ತಿ ಎಂದು ಹೇಳಿದ್ದಾರೆ. ಇದು ಒಟ್ಟು ಅಧ್ಯಾತ್ಮಕ್ಕೆ ಇರುವ ಬಹಳ ದೊಡ್ಡ ಅಡಿಪಾಯ ಎಂದರು.
Advertisement
ಅಲ್ಲಮ ತಂತ್ರದ ಆಚೆಗಿನವರಾದರು ತಂತ್ರವನ್ನು ಅಭ್ಯಸಿಸಿರಬಹುದು, ಅಕ್ಕಮಹಾದೇವಿ ಭಕ್ತಿ ಪಥದಲ್ಲಿ ಮುಳುಗಿ ಹೋದ ಸ್ವಯಂಭೂ ಭೈರವಿ ಎನ್ನಬಹುದು. ಬಸವಣ್ಣನವರು ಕರ್ಮ ಮಾರ್ಗದ ಭಕ್ತ ಎಂದು ಉಪನ್ಯಾಸ ನೀಡಿದರು. ಅಜೆಕಾರು ಶ್ರೀಕಾಂತ್ ಶೆಟ್ಟಿ ದೈವರಾಧನೆಯಲ್ಲಿ ತಂತ್ರ ಮತ್ತು ವಸಂತ್ ಗಿಳಿಯಾರ್ ಜೀವನದಲ್ಲಿ ತಂತ್ರ ವಿಷಯದ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು. ಸಾವಿರಾರು ಜನ ಸಾಹಿತ್ಯೋತ್ಸವದಲ್ಲಿ ಪಾಲ್ಗೊಂಡರು.
ವೇದಿಕೆಯಲ್ಲಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ, ಗೋಳಿಗರಡಿ ಗುತ್ತಿನ ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ್ ಹೆಗ್ಡೆ, ಜಾನಪದ ಪರಿಷತ್ ನ ಜಿಲ್ಲಾಧ್ಯಕ್ಷ ಡಾ| ತಲ್ಲೂರು ಶಿವರಾಂ ಶೆಟ್ಟಿ, ಜಾರಿಗೆಕಟ್ಟೆ ದಿವಾಕರ ಪೂಜಾರಿ, ಅಮಿತಾ ಕಿರಣ್ ಉಪಸ್ಥಿತರಿದ್ದರು.