ಬೆಂಗಳೂರು: ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿರುವ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಜಾರಿ ಮಾಡಲ್ಲ ಎಂದು ಹೇಳಿದ್ದು ಯಾರು? ರಾಜಕಾರಣಕ್ಕೊಸ್ಕರ ಪಾದಯಾತ್ರೆ ಮಾಡುತ್ತಿದ್ದಾರೆ. ಅವರು ಪಾದಯಾತ್ರೆ ಮಾಡಿದರೆ ನಮ್ಮದೇನು ಅಭ್ಯಂತರ ಇಲ್ಲ. ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ: ಅರಗ ಜ್ಞಾನೇಂದ್ರ
ಯಾವುದೇ ಕಾರಣಕ್ಕೂ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ನಳೀನ್ ಕುಮಾರ್ ಕಟೀಲ್ ಅವರೇ ಇರುತ್ತಾರೆ. ಅವರು ಬದಲಾವಣೆಯಾಗುವುದಿಲ್ಲ. ಇದು ಕತ್ತಲಲ್ಲಿ ಕರಿ ಬೆಕ್ಕು ಹುಡುಕಿದಂಗೆ. ಸುಮ್ಮನೇ ಆ ರೀತಿ ಹೇಳಬಾರದು. ಅವರು ರಾಜ್ಯಾದ್ಯಂತ ಉತ್ತಮ ಕೆಲಸ ಮಾಡ್ತಿದ್ದಾರೆ. ಚುನಾವಣೆಗಳನ್ನು ಗೆಲ್ಲುತ್ತಾ ಬಂದಿದ್ದೇವೆ. ಸಂಘಟನೆ ಚೆನ್ನಾಗಿ ಮಾಡ್ತಿದ್ದಾರೆ. ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಬಿಟ್ ಕಾಯಿನ್ ನಲ್ಲಿ ಪ್ರಭಾವಿಗಳಿದ್ದಾರೆ ಎಂಬ ವಿಪಕ್ಷಗಳ ಆರೋಪ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನಾನೇನು ಹೇಳಲು ಹೋಗಲ್ಲ. ಇದರಲ್ಲಿ ಕಾಂಗ್ರೆಸ್ ಅವರು ಇದ್ದಾರಾ? ಜೆಡಿಎಸ್ ಅವರು ಇದ್ದಾರಾ? ಯಾರಿದ್ದಾರೆ ಅನ್ನೋದು ತನಿಖೆಯಿಂದ ಗೊತ್ತಾಗಲಿದೆ. ಡ್ರಗ್ಸ್, ಬಿಟ್ ಕಾಯಿನ್ ಬಗ್ಗೆ ನನಗೆ ಯಾರಿದ್ದಾರೆ ಅಂತಾ ಗೊತ್ತಿಲ್ಲ. ಅದಕ್ಕೆ ನಾನೇನು ಹೇಳೋಕೆ ಹೋಗಲ್ಲ. ಸಿಎಂ ಮಗನಿದ್ದಾರಾ? ಸಚಿವರ ಮಗನಿದ್ದಾರಾ? ಇದೆಲ್ಲ ಸಾರ್ವಜನಿಕ ಚರ್ಚೆಯಾದ್ರೆ ನಾನ್ಯಾಕೆ ಉತ್ತರಿಸಲಿ. ಪ್ರಸ್ತುತ ಈ ಕುರಿತು ತನಿಖೆಯಾಗ್ತಿದ್ದು, ನಂತರ ಈ ಹಿಂದೆ ಯಾರಿದ್ದಾರೆ ಅನ್ನೋದು ಗೊತ್ತಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗುಂಡು ಹಾರಿಸಿ ತಂದೆ, ಮಗನ ಹತ್ಯೆ – ನಿರ್ಲಕ್ಷ್ಯ ತೋರಿದ ಇಬ್ಬರು ಪೊಲೀಸರ ಅಮಾನತು