ಶಿವಮೊಗ್ಗ: ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಜೆಡಿಎಸ್ ಜೊತೆ ಸೇರಿ ಕಾಂಗ್ರೆಸ್ಸಿನವರು ಸರ್ಕಾರ ರಚಿಸಿ ಈಗ ಬಿಜೆಪಿಯವನ್ನೇ ದೂಷಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ತಿರುಗೇಟು ಕೊಟ್ಟಿದ್ದಾರೆ.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುವುದಿಲ್ಲ. ಸಮ್ಮಿಶ್ರ ಸರ್ಕಾರವೇ ಅಸ್ಥಿರಗೊಂಡು ಬೀಳಲಿದೆ. ಈ ಸರ್ಕಾರ ಪಾಪದ ಕೂಸು. ಇದು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಶಾಸಕರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ನಂಬಿಕೆ ಇಲ್ಲ. ಹೀಗಾಗಿ ಬಿಜೆಪಿ ನಾಯಕರ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳದ ಸ್ಥಿತಿಯಲ್ಲಿ ಇದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಸಮನ್ವಯವಿಲ್ಲ. ಇನ್ನು ಸಭೆ ನಡೆಸಿದರೆ ಏನು ಪ್ರಯೋಜನ ಎಂದು ಕಾಲೆಳೆದರು.
ಫೋನ್ ಕದ್ದಾಲಿಕೆ ಆರೋಪ ಬಂದಿದೆ. ಹಾಗಾದರೆ ಎಚ್.ಡಿ.ಕುಮಾರಸ್ವಾಮಿ ಇದನ್ನು ನಿರಾಕರಿಸುವ ಬದಲು ತನಿಖೆಗೆ ಆದೇಶ ನೀಡಲಿ ಅಥವಾ ಕೇಂದ್ರ ಸರ್ಕಾರ ಇದರ ಬಗ್ಗೆ ತನಿಖೆ ನಡೆಸುವಂತೆ ಪತ್ರ ಬರೆಯಲಿ ಎಂದು ಆಗ್ರಹಿಸಿದ ಅವರು, ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‍ಗೆ ಎಚ್.ಡಿ.ಕುಮಾರಸ್ವಾಮಿ ದೂರು ನೀಡಿದ್ದಾರೆ. ಈ ಕುರಿತು ಯಾರೊಬ್ಬರೂ ಬಾಯಿ ಬಿಡುತ್ತಿಲ್ಲ. ಇಂತಹ ಸಮನ್ವಯ ಸಮಿತಿಯಿಂದ ರಾಜ್ಯದ ಜನತೆಗೆ ಏನೂ ಲಾಭವಾಗಲ್ಲ ಎಂದು ವ್ಯಂಗ್ಯವಾಡಿದರು. ಇದನ್ನು ಓದಿ: ಫೋನ್ ಕದ್ದಾಲಿಕೆ ಯಾಕೆ? ಹೇಗೆ? ಯಾರು ಮಾಡಬಹುದು?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv