-ನಾವು ಪ್ರಧಾನಿ ಮೋದಿ, ಸಂಘಟನೆ, ಹಿಂದುತ್ವದ ಆಧಾರ ಮೇಲೆ ಚುನಾವಣೆ ಗೆಲ್ಲುತ್ತೇವೆ
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶೈಲಿಯಲ್ಲಿಯೇ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪನವರು ಜೆಡಿಎಸ್‍ಗೆ ಟಾಂಗ್ ಕೊಟ್ಟಿದಾರೆ. ನಾಳೆ ನಾಮಪತ್ರ ಸಲ್ಲಿಸಲು ಸಿದ್ದರಾಮಯ್ಯ ಅವರನ್ನು ಸೋಲಿಸಿದ ರಾಹು, ಕೇತು, ಶನಿಗಳು ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗ ಲೋಕಸಭಾ ಉಪಚುನಾವಣೆಗೆ ಇಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ನಾಮಪತ್ರ ಸಲ್ಲಿಸಿದರು. ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು, ಸಿದ್ದರಾಮಯ್ಯ ಅವರು ಹುಚ್ಚುಹುಚ್ಚಾಗಿ ಮಾತನಾಡುತ್ತಿದ್ದಾರೆ. ಅವರನ್ನು ನಂಬಿ ಮಧು ಬಂಗಾರಪ್ಪ ಅವರು ಚುನಾವಣೆಗೆ ನಿಲ್ಲುತ್ತಿದ್ದಾರೆ. ದಂಗೆ ಏಳಲು ಕರೆ ನೀಡುತ್ತೇನೆ ಅಂತಾ ಹೇಳಿದ್ದ ಸರ್ವಾಧಿಕಾರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕ್ಷಮೆ ಕೇಳುವಂತೆ ಜಿಲ್ಲೆಯ ಜನತೆಗೆ ಒತ್ತಾಯಿಸುತ್ತೇನೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿ ತಲುಪಿದೆ ಎನ್ನುವುದಕ್ಕೆ ಶಿವಮೊಗ್ಗ ಕ್ಷೇತ್ರವೇ ಉದಾಹರಣೆ. ಇಲ್ಲಿ ಕಾಂಗ್ರೆಸ್‍ನ ಒಬ್ಬ ಅಭ್ಯರ್ಥಿ ಕೂಡ ಇಲ್ಲದಂತಾಗಿದೆ. ಮಧು ಬಂಗಾರಪ್ಪ ಅವರು ಆರಾಮಾಗಿ ವಿದೇಶದಲ್ಲಿ ಇದ್ದರು. ಅವರನ್ನು ಬಾ.. ಬಾ.. ಅಂತಾ ಕರೆತಂದು ಮಾರಮ್ಮನ ಜಾತ್ರೆಗೆ ಕುರಿ ಕರೆದುಕೊಂಡು ಬಂದಂತೆ ಕರೆಸಿದ್ದಾರೆ. ಹಣ ಇಲ್ಲ, ನಾನು ಉಪಚುನಾವಣೆ ಕಣಕ್ಕೆ ಇಳಿಯುವುದಿಲ್ಲ ಅಂತಾ ಕಿಮ್ಮನೆ ರತ್ನಾಕರ್ ಅವರು ಹೇಳಿದ್ದಾರೆ. ಈಗ ಮಧು ಬಂಗಾರಪ್ಪ ಅವರಿಗೆ ಯಾರು ಹಣ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಇದಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಸಂಘಟನೆ, ಹಿಂದುತ್ವದ ಆಧಾರ ಮೇಲೆ ಉಪಚುನಾವಣೆ ಗೆಲ್ಲುತ್ತೇವೆ ಎಂದು ಹೇಳಿದರು. ಬಿಜೆಪಿ ಬಹಿರಂಗ ಸಭೆಯಲ್ಲಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಗೋವಿಂದ ಕಾರಜೋಳ ಸೇರಿದಂತೆ ಅನೇಕ ಶಾಸಕರು ಭಾಗವಹಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv