ವಿಜಯಪುರ: ಸಚಿವ ಎಂ.ಬಿ.ಪಾಟೀಲ್ ಅವರು ಬಸವಣ್ಣವರ ಮುಂದಿನ ಉತ್ತರಾಧಿಕಾರಿ ನಾನೇ ಎಂದು ಹೇಳಿದ್ದು, ಆದರೆ ಬಸವಣ್ಣವರ ಕಾಲಿನ ಧೂಳಿಗೆ ನಾವ್ಯಾರು ಸಮಾನರಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಇತ್ತ ಸಿಎಂ ಸಿದ್ದರಾಮಯ್ಯ ಮುಂದಿನ ಸಿಎಂ ನಾನೇ ಎಂದು ಹೇಳಿಕೊಳ್ಳುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ನಲ್ಲಿ ಮೂರು ಗುಂಪಾಗಿದೆ. ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರು ತಿರುಕನ ಕನಸು ಕಾಣುತ್ತಿದ್ದಾರೆ. ಯಡಿಯೂರಪ್ಪ ಮುಂದಿನ ಸಿಎಂ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂದು ಯಾರು ಹೇಳಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
Advertisement
ಕ್ಷೇತ್ರ ಬದಲಾವಣೆಯಿಲ್ಲ: ಯಡಿಯೂರಪ್ಪ ಅವರನ್ನು ಹೊರತು ಪಡಿಸಿ ಬೇರೆ ಯಾವ ಬಿಜೆಪಿ ನಾಯಕರು ಕ್ಷೇತ್ರವನ್ನು ಬದಲಿಸುವುದಿಲ್ಲ. ಬಿಜೆಪಿ ಪಕ್ಷವು ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿಯೂ ಪ್ರಬಲವಾಗಿದೆ. ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿರುವ ಸಿಎಂ ಅವರಿಗೆ ಲಿಂಗಾಯತ ಪ್ರತ್ಯೇಕ ಧರ್ಮ ವಿಷಯವೇ ತಿರುಗು ಬಾಣವಾಗಲಿದೆ. ಸಿದ್ದರಾಮಯ್ಯನವರು ಹೇಳಿಕೆಗಳನ್ನು ನೀಡುವ ಮೊದಲು ಚುನಾವಣೆ ಗೆದ್ದು ತೋರಿಸಲಿ ಎಂದು ಅವರು ಸವಾಲು ಹಾಕಿದರು.