ಬೆಂಗಳೂರು: ದೋಸ್ತಿ ಸರ್ಕಾರದ ನಾಯಕರು ಮಕ್ಕಳ ಕಳ್ಳರು ಇದ್ದಂತೆ. ಅವರಿಂದ ನಮ್ಮ ಬಿಜೆಪಿ ಶಾಸಕರನ್ನ ಕಾಪಾಡಿಕೊಳ್ಳಲು ರೆಸಾರ್ಟ್‍ನಲ್ಲಿ ಉಳಿದುಕೊಳ್ಳಬೇಕಾಯಿತು ಎಂದು ಮೈತ್ರಿ ಸರ್ಕಾರದ ನಾಯಕರ ವಿರುದ್ಧ ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಜೊತೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧಿವೇಶನಕ್ಕೆ ನಾವೆಲ್ಲ ಹೋಗಿದ್ದು, ಲೋಕಸಭಾ ಚುನಾವಣಾ ತಯಾರಿ ಹಿನ್ನೆಲೆ ಅಲ್ಲೇ ಎರಡು ದಿನ ಉಳಿದಿದ್ದೇವೆ. ಕಾಂಗ್ರೆಸ್ ಭಿನ್ನಮತದಿಂದ ಕೆಲವರು ಪಕ್ಷ ಬಿಟ್ಟು ಹೊರಬರುತ್ತಿದ್ದಾರೆ. ಆದರಿಂದ ಬಿಜಪಿ ಶಾಸಕರನ್ನ ಕಾಂಗ್ರೆಸ್ ತಮ್ಮತ್ತ ಸೆಳೆಯಲು ಪ್ರಯತ್ನ ಮಾಡುತ್ತಿದೆ. ಶಾಸಕ ಸುಭಾಷ್ ಗುತ್ತೆದಾರ್‍ಗೆ ಕುಮಾರಸ್ವಾಮಿ ಆಫರ್ ನೀಡಿ, ಪಕ್ಷಕ್ಕೆ ಬನ್ನಿ ಮಂತ್ರಿ ಮಾಡ್ತೀವಿ ಅಂತ ಆಸೆ ತೋರಿಸಿದ್ದರು. ಬಿಜೆಪಿಯ 3 ಎಂಎಲ್‍ಎ ನಮ್ಮ ಸಂಪರ್ಕದಲ್ಲಿ ಇದ್ದಾರೆ ಅಂತ ಸಿಎಂ ಅವರೇ ಹೇಳಿದ್ದಾರೆ. ಮೈತ್ರಿ ಸರ್ಕಾರದಲ್ಲಿರುವ ಗುಂಪುಗಾರಿಕೆ, ಗೊಂದಲ ಸರಿ ಮಾಡಿಕೊಳ್ಳಲು ಬಿಜೆಪಿಯವರ ಮೇಲೆ ಕಣ್ಣು ಹಾಕಿದ್ದಾರೆ. ಮಕ್ಕಳ ಕಳ್ಳರು ಬಂದಾಗ ಮಕ್ಕಳನ್ನ ಜೋಪಾನ ಮಾಡೋದು ನಮ್ಮ ಕರ್ತವ್ಯ. ಹೀಗಾಗಿ ಲೋಕಸಭಾ ಚುನಾವಣಾ ತಯಾರಿಯೂ ಆಯ್ತು. ಮಕ್ಕಳ ಕಳ್ಳರಿಂದ ಶಾಸಕರ ರಕ್ಷಣೆ ಮಾಡಿದಂತಾಯ್ತು. ಇದಕ್ಕಾಗಿ ನಾವು ದೆಹಲಿಯಲ್ಲೇ ತಂಗಿದ್ದೇವು ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.
ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಅಂತ ಮಾತಾಡಿದ್ದು ನಮಗೆ ತುಂಬಾ ನೋವಾಗಿದೆ. ಕಾಂಗ್ರೆಸ್ ಮನೆ ಯಜಮಾನ ಸರಿ ಇಲ್ಲ. ಅವರ ಪಕ್ಷದ ಕೆಲ ಶಾಸಕರು ಸಿಎಲ್‍ಪಿಗೆ ಹೋಗಿಲ್ಲ. ಅವರ ಮನೆ ಸರಿ ಇಟ್ಟುಕೊಳ್ಳದೇ ಬಿಜೆಪಿ ಮೇಲೆ ಅಪಾದನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ವಯಸ್ಸಾಗಿಲ್ವಾ? ಇನ್ನೂ ಯುವಕರೇ? ಹುಚ್ಚು ಹುಚ್ಚಾಗಿ ಮಾತನಾಡುತ್ತಿರುವ ಸಿದ್ದರಾಮಯ್ಯ ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕು. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟು ಜೆಡಿಎಸ್‍ಗೆ ದ್ರೋಹ ಮಾಡಿ ಕಾಂಗ್ರೆಸ್‍ಗೆ ಹೋದರು. ಕಾಂಗ್ರೆಸ್‍ನ ಶಾಸಕರು ಸಿದ್ದರಾಮಯ್ಯ, ವೇಣುಗೋಪಾಲ್ ಸರಿ ಇಲ್ಲ ಅಂತ ಪಕ್ಷ ಬಿಡ್ತಿದ್ದಾರೆ. ಇನ್ನೂ 20-25 ಜನ ಕಾಂಗ್ರೆಸ್ ಶಾಸಕರು ಬಿಟ್ಟು ಹೋಗ್ತಾರೆ ಇದನ್ನು ನೆನಪಿಟ್ಟುಕೊಳ್ಳಿ ಎಂದು ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದರು.
ಬಿಜೆಪಿ ಬಗ್ಗೆ ಮಾತನಾಡುವ ಅಧಿಕಾರ ನಿಮಗಿಲ್ಲ. ಬಿಜೆಪಿಯ 104 ಶಾಸಕರು ಒಗ್ಗಟ್ಟಾಗಿ ಇರ್ತೇವೆ. ನೀವು ಸರಿಯಲ್ಲ ಅಂತ ನಿಮ್ಮ ಶಾಸಕರು ಹೊರಬಂದ್ರೆ ನಮಗೆ ಸಂಬಂಧ ಇಲ್ಲ. ನಿಮ್ಮ ಕಾಂಗ್ರೆಸ್- ಜೆಡಿಎಸ್ ಸರ್ಕಾರ ಉಳಿಯಲ್ಲ. ನಿಮ್ಮ ಶಾಸಕರೇ ನಿಮ್ಮನ್ನ ಚೀ ಥೂ ಅಂತಾರೆ. ಯಡಿಯೂರಪ್ಪನವರ ಬಗ್ಗೆ ಮಾತಾಡಿರುವುದು ಕಾಂಗ್ರೆಸ್ ಶಾಸಕರಿಗೆ ಬೇಜಾರಾಗಿದೆ. ರಾಜ್ಯದಲ್ಲಿ ಅದೆಷ್ಟು ಬೇಗ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತ ಎಲ್ಲರು ಕಾಯುತ್ತಿದ್ದಾರೆ. ಯಾವ ಕಾಂಗ್ರೆಸ್-ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿಲ್ಲ. ನಿಮ್ಮ ಪಕ್ಷದ ಶಾಸಕರೇ ನಿಮ್ಮನ್ನ ಬಿಟ್ಟು ಹೋಗ್ತಿದ್ದಾರೆ. ನಾಚಿಕೆ ಮಾನ ಮರ್ಯಾದೆ ಇದ್ರೆ ತಕ್ಷಣ ಶಾಸಕಾಂಗ ನಾಯಕ ಸ್ಥಾನ ಹಾಗೂ ಸಮನ್ವಯ ಸಮಿತಿಗೆ ರಾಜೀನಾಮೆ ಬಿಸಾಕಿ ಹೋಗಬೇಕು. ಸಿಎಂ ಸ್ಥಾನ ಹೋದ ಮೇಲೆ ಮತ್ತೆ ಸಿಎಂ ಆಗಲು ಆಸೆ ಪಡುತ್ತಿದ್ದೀರಿ. 104 ಸ್ಥಾನ ಇರುವ ನಾವು ಅಧಿಕಾರಕ್ಕೆ ಬರ್ತೀವಿ ಅಂತ ಹೇಳೋದು ತಪ್ಪೇ ಯಡಿಯೂರಪ್ಪ ನವರ ಬಗ್ಗೆ ಮಾತನಾಡಿರುವುದಕ್ಕೆ ಕ್ಷಮೆ ಕೇಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಹರಿಹಾಯ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv