ಶಿವಮೊಗ್ಗ: ಇಡಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಶಿವಕುಮಾರ್ ತಪ್ಪಿತಸ್ಥರಾಗಿದ್ದರೆ ಅನುಭವಿಸುತ್ತಾರೆ. ತಪ್ಪು ಮಾಡಿಲ್ಲ ಎಂದರೆ ಹೊರ ಬರುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇಡಿ ಬಂಧನದಲ್ಲಿರುವ ಡಿಕೆ ಶಿವಕುಮಾರ್ ಅವರು ಯಾವುದೇ ತನಿಖೆಯನ್ನು ನಾನು ಎದುರಿಸಲು ಸಿದ್ಧನಿದ್ದೇನೆ ಎಂದು ಈ ಮೊದಲೇ ಹೇಳಿದ್ದರು. ಅಲ್ಲದೇ ನ್ಯಾಯಾಂಗದ ಮೂಲಕ ನನಗೆ ನ್ಯಾಯ ಸಿಗುತ್ತೆ. ಪಕ್ಷ ಹಾಗೂ ನನ್ನ ಜನಾಂಗ ನನ್ನ ಜೊತೆ ಇದೆ. ನಾನು ಯಾವುದೇ ತಪ್ಪು ಮಾಡಿಲ್ಲ ನಾನು ಆರೋಪ ಮುಕ್ತನಾಗಿ ಹೊರ ಬರುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಇಡಿ ವಿಚಾರಣೆ ಬಳಿಕ ಅವರ ಒಂದೊಂದೇ ಅಕ್ರಮಗಳು ಹೊರ ಬರುತ್ತಿವೆ ಎಂದರು.
Advertisement
Advertisement
ಡಿಕೆ ಶಿವಕುಮಾರ್ ತಪ್ಪಿತಸ್ಥರೋ ಅಲ್ಲವೋ ಎಂಬುದನ್ನು ಇಡಿ ನಿರ್ಧರಿಸುತ್ತೆ. ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಹಾಕಿದ್ದರೂ ಜಾಮೀನು ಸಿಕ್ಕಿಲ್ಲ. ಹೀಗಿರುವಾಗ ಜಾಮೀನು ಸಿಕ್ಕಿಲ್ಲ ಅಂದರೆ ಏನು ಅರ್ಥ? ಅವರು ತಪ್ಪು ಮಾಡಿರಬಹುದು ಎಂಬರ್ಥ ಇರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Advertisement
ಕಾಂಗ್ರೆಸ್ ಉಳಿಸಲು ಹೋದರೆ ಅವರ ಭ್ರಷ್ಟಾಚಾರ ಮುಚ್ಚಿಡಲು ಆಗುತ್ತಾ? ಡಿಕೆಶಿ ಅವರು ಯಾವುದೇ ಟ್ರಬಲ್ ಶೂಟರ್ ಅಲ್ಲ. ಜಾತಿ ಮೇಲೆ ಚುನಾವಣೆ ನಡೆಯುವ ಕಾಲ ಹೋಗಿದೆ. ಸಿದ್ದರಾಮಯ್ಯ ಜಾತಿ ಜಾತಿ ಎಂದುಕೊಂಡು ಅವರ ಕ್ಷೇತ್ರದಲ್ಲಿ 36 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ದೇವೇಗೌಡರು ಅವರ ಮೊಮ್ಮಗ ನಿಖಿಲ್ ಸಹ ಜಾತಿ ಜಾತಿ ಎಂದು ಸೋಲು ಅನುಭವಿಸಿದ್ದಾರೆ. ಇನ್ನು ಮುಂದೆ ಜಾತಿ ಮೇಲೆ ಚುನಾವಣೆ ನಡೆಯುವುದಿಲ್ಲ. ಜಾತಿ ಅಲ್ಲ ದೇಶ ಮೊದಲು ಎಂದು ಮತದಾರರು ತೋರಿಸಿದ್ದಾರೆ. ಮೋದಿಯವರ ಮೇಲೆ ನಂಬಿಕೆ ಇಟ್ಟು 25 ಸ್ಥಾನ ಗೆಲ್ಲಿಸಿದ್ದಾರೆ ಎಂದರು.
Advertisement
ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕನಾಗಬೇಕು, ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಕನಸು ಕಾಣುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯುವುದಿಲ್ಲ. ಬಿಜೆಪಿ ಸರಕಾರ ಸಂಪೂರ್ಣ ಅವಧಿ ಪೂರ್ಣಗೊಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.