ರಾಯಚೂರು: ಅಧಿಕಾರದಲ್ಲಿದ್ದಾಗ ನಾನು ತಪ್ಪು ಮಾಡಿದ್ರೆ ಆಗ ಪ್ರಿಯಾಂಕಾ ಖರ್ಗೆ ಅವರು ನಿದ್ದೆ ಮಾಡುತ್ತಿದ್ದರಾ? ನಾನು ತಪ್ಪು ಮಾಡಿದ್ದರೆ ಈ ಬಗ್ಗೆ ಬಯಲು ಮಾಡಲಿ ಎಂದು ನಿವೃತ್ತ ಐಎಎಸ್ ಅಧಿಕಾರಿ, ಬಿಜೆಪಿ ನಾಯಕಿ ರತ್ನಪ್ರಭಾ ಸವಾಲು ಹಾಕಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹೇಳಿಕೊಟ್ಟ ಹಾಗೆ ಹೇಳಿಕೆ ನೀಡಿದರೆ ಅಧಿಕಾರದಲ್ಲಿದ್ದಾಗ ಮಾಡಿದ್ದ ತಪ್ಪುಗಳನ್ನ ಹೊರಹಾಕುತ್ತೇವೆ ಎಂದಿದ್ದ ಪ್ರಿಯಾಂಕಾ ಖರ್ಗೆ ಅವರಿಗೆ ತಿರುಗೇಟು ನೀಡಿದರು.
ನಿವೃತ್ತಿ ಆದ ಮೇಲೆ ಅಭಿವೃದ್ಧಿಗಾಗಿ ಚುನಾವಣೆಯಲ್ಲಿ ಮತ ನೀಡಿ ಎಂದು ಜನರಲ್ಲಿ ಬೇಡಿಕೊಳ್ಳುತ್ತಿದ್ದೇವೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ವೇಗವಾಗಿ ಅಭಿವೃದ್ಧಿ ಆಗಬೇಕು, ಹಾಗಾಗಿ ಬಿಜೆಪಿ ಮೂಲಕ ರಾಜಕೀಯಕ್ಕೆ ಬಂದಿದ್ದೇನೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಈ ಭಾಗದಲ್ಲಿ ಅಭಿವೃದ್ಧಿ ವೇಗ ಕಡಿಮೆ ಇದೆ. ನಾನು ಅಧಿಕಾರದಲ್ಲಿದ್ದಾಗ ಸಾಕಷ್ಟು ಕೆಲಸಗಳನ್ನ ಮಾಡಲು ಆಗಲಿಲ್ಲ. ಈಗ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯಾದ್ಯಂತ ಓಡಾಡುತ್ತೇನೆ. ಸದಾಶಿವ ಆಯೋಗ ವರದಿ ವಿಚಾರದಲ್ಲಿ ರಾಜಕೀಯ ನಿರ್ಣಯ ತೆಗೆದುಕೊಳ್ಳಬೇಕು. ನನ್ನ ಅವಧಿ ವೇಳೆ ಸದನದಲ್ಲಿ ಈ ಬಗ್ಗೆ ಚರ್ಚೆ ಆಗಿತ್ತು. ಆದರೆ ಆ ವೇಳೆಗೆ ಚುನಾವಣಾ ದಿನಾಂಕ ಘೋಷಣೆ ಆಗಿ ನೀತಿ ಸಂಹಿತೆ ಜಾರಿ ಆಗಿತ್ತು. ಅದ್ದರಿಂದ ಅದನ್ನು ಕೈ ಬಿಡಲಾಯಿತು. ಸದ್ಯ ಈ ಬಗ್ಗೆ ಚರ್ಚೆ ನಡೆಸಬೇಕು. ಸದಾಶಿವ ಆಯೋಗ ವರದಿ ಜಾರಿ ಆಗಲೇಬೇಕು ಎಂದು ಹೇಳಿದರು.