– ಹಾಲಿ ಶಾಸಕ ಯಶ್ ಪಾಲ್ ಸುವರ್ಣ ಜೊತೆ ಮಾಜಿ ರಘುಪತಿ ಭಟ್ ಕೋಲ್ಡ್ ವಾರ್
ಉಡುಪಿ: ಮುಂದಿನ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ. ಬಿಜೆಪಿಯಲ್ಲಿ ನಿಲ್ಲಬಹುದು ಅಥವಾ ಪಕ್ಷೇತರನಾಗಿ ಸ್ಪರ್ಧಿಸಬಹುದು ಎಂದು ಉಡುಪಿ (Udupi) ಮಾಜಿ ಶಾಸಕ ಬಿಜೆಪಿಯ ಉಚ್ಚಾಟಿತ ನಾಯಕ ರಘುಪತಿ ಭಟ್ (K.Raghupati Bhat) ಹೇಳಿದ್ದಾರೆ. ಉಡುಪಿಯಲ್ಲಿ ಪತ್ರಿಕಾಗೋಷ್ಠಿ ವೇಳೆ ಮಾತನಾಡಿದ ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಇನ್ನೊಂದು ಬಾರಿ ವಿಧಾನಸಭೆಗೆ ಸ್ಪರ್ಧಿಸಬೇಕು ಎಂದು ನಿರ್ಧರಿಸಿದ್ದೇನೆ. ಜನತೆ ನನ್ನನ್ನು ಈವರೆಗೆ ಸೋಲಿಸಿಲ್ಲ. ಉಡುಪಿ ವಿಧಾನಸಭಾ ಕ್ಷೇತ್ರದಿಂದ ನಾನು ಮೂರು ಬಾರಿಗೆ ಗೆದ್ದಿದ್ದೇನೆ. ಇನ್ನೂ ಮೂರುವರೆ ವರ್ಷ ಇದೆ. ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂದು ಮುಂದೆ ನಿರ್ಧರಿಸುತ್ತೇನೆಂದು ರಘುಪತಿ ಭಟ್ ಉಡುಪಿಯ ಗುಂಡಿಬೈಲಿನಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ: ಪಕ್ಷ ಸಂಘಟನೆಗಾಗಿ ಡಿಕೆಶಿ ಹೋರಾಟ ಮಾಡ್ತಿದ್ದಾರೆ, ಸಮಯ ಬಂದಾಗ ಸ್ಥಾನಮಾನ ಸಿಕ್ಕೇ ಸಿಗುತ್ತೆ: ಇಕ್ಬಾಲ್ ಹುಸೇನ್
ಬಿಜೆಪಿ ಸೇರ್ಪಡೆ ಬಗ್ಗೆ ಉತ್ತರಿಸಿದ ಅವರು, ಪಕ್ಷ ಕರೆದರೆ ನಾನು ಬಿಜೆಪಿಗೆ ಸೇರುತ್ತೇನೆ. ಸದ್ಯದ ಬೆಳವಣಿಗೆಗಳನ್ನು ನೋಡುತ್ತಿರುವಾಗ ಬಿಜೆಪಿಗೆ ನನ್ನ ಅವಶ್ಯಕತೆ ಇಲ್ಲ ಅಂತ ಅನ್ನಿಸಿರಬೇಕು. ಹಾಗಾಗಿ ಬಿಜೆಪಿ ನನ್ನನ್ನು ಆಹ್ವಾನಿಸುತ್ತಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ಮತ್ತು ಇತರ ಯಾವುದೇ ಚರ್ಚೆ ನಡೆದಿಲ್ಲ. ಕಾಂಗ್ರೆಸ್‌ನ ಯಾರೂ ನನ್ನನ್ನು ಭೇಟಿ ಆಗಿಲ್ಲ. ನಾನೂ ಯಾರನ್ನೂ ಭೇಟಿ ಆಗಿಲ್ಲ. ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಮಿಸ್ ಕಾಲ್ ಕೊಟ್ಟಿದ್ದೇನೆ. ಸ್ಥಾನೀಯ ಸಮಿತಿ, ನಗರ ಸಮಿತಿ ಅಪ್ರೋವ್ ಮಾಡುತ್ತದೋ ಇಲ್ಲವೋ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿಯನ್ನು ಚೆನ್ನಮ್ಮಗೆ ಹೋಲಿಸಿ ಅಪಮಾನ: ಸಿ.ಟಿ ರವಿ ಕಿಡಿ
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ-ಮಾಜಿ ಶಾಸಕರ ಭಿನ್ನಮತ ಜೋರಾಗಿದೆ. ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಮಾಜಿ ಬಿಜೆಪಿ ಶಾಸಕ ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದರು. ನಾನು ಆರಂಭಿಸಿದ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಹಾಲಿ ಶಾಸಕರಿಂದ ಅಡ್ಡಗಾಲು ಹಾಕಿದ್ದಾರೆ. ನನ್ನ ಮೇಲೆ ಯಾಕೆ ವೈಯಕ್ತಿಕ ದ್ವೇಷ ಮಾಡುತ್ತಿದ್ದಾರೋ ಗೊತ್ತಿಲ್ಲ. ಯಾವುದೇ ಜನಪ್ರತಿನಿಧಿಗೆ ಇಷ್ಟು ಕೃತಜ್ಞತೆ ಇರಬಾರದು ಎಂದ ಭಟ್, ತನ್ನ ಅವಧಿಯಲ್ಲಿ ನಿರ್ಮಾಣವಾದ ಡಿಜಿಟಲ್ AI ಸಿಗ್ನಲ್‌ಗೆ ಹಾಲಿ ಶಾಸಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಈಗಿನ ಶಾಸಕರ ಬಗ್ಗೆ ನೂರಕ್ಕೆ ನೂರು ಬೇಸರ ಇದೆ. ನಾನು ವಿಧಾನಪರಿಷತ್ ಚುನಾವಣೆಯಲ್ಲಿ ಸ್ವತಂತ್ರವಾಗಿ ನಿಲ್ಲಲು ಕೂಡ ಅವರೇ ಕಾರಣ. ಟ್ರಾಫಿಕ್ ಜಂಕ್ಷನ್ ನನ್ನ ಯೋಜನೆ ಎನ್ನುವ ಕಾರಣಕ್ಕೆ ನಿಲ್ಲಿಸಿದ್ದಾರೆ. ನಾನು ನಗರದ ಸಮಸ್ಯೆಯನ್ನು ಅವರಿಗೆ ಕನ್ವಿನ್ಸ್ ಮಾಡಿದರೂ ಕೇಳಲಿಲ್ಲ. ಕೃತಜ್ಞತೆ ಇರುವ ಯಾವುದೇ ವ್ಯಕ್ತಿ ಹೀಗೆ ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಶಾಸಕ ಲಾಲಾಜಿಗೆ ಗೌರವ ಕೊಡ್ತಾರೆ, ಕುಂದಾಪುರ ಶಾಸಕ ಕೊಡ್ಗಿಯವರು ಹಾಲಾಡಿಗೆ ಗೌರವ ಕೊಡ್ತಾರೆ. ನಾನು ಪಕ್ಷದಲ್ಲಿ ಇರುವವರೆಗೆ ಯಾವ ರೀತಿ ನನ್ನನ್ನು ನಡೆಸಿಕೊಂಡು ಅನ್ನೋದು ಎಲ್ಲರಿಗೂ ಗೊತ್ತಿದೆ. ನನ್ನ ಫೋಟೋಗಳನ್ನು ತೆಗೆಸಿದರು. ಪಕ್ಷದ ಕಾರ್ಯಕ್ರಮಗಳಿಂದ ದೂರ ಇಟ್ಟರು. ವೈಯಕ್ತಿಕವಾಗಿ ನನ್ನ ವ್ಯವಹಾರಗಳಿಗೆ ಅಡ್ಡಿಪಡಿಸಿದರು. ಯಶ್ ಪಾಲ್ ಸುವರ್ಣ ಬೆಳವಣಿಗೆಯಲ್ಲಿ ನನ್ನ ಪಾತ್ರ ಏನು ಅನ್ನೋದು ಉಡುಪಿ ಜನತೆಗೆ ಗೊತ್ತಿದೆ. 2004ರಲ್ಲಿ ನಾನು ಚುನಾವಣೆ ನಿಂತಾಗ ನನ್ನ ಎದುರು ಪ್ರಚಾರ ಮಾಡಿದ್ದರು. ಬೆತ್ತಲೆ ಪ್ರಕರಣ ಆದಾಗ ನಾನು ಬೆಂಬಲ ಕೊಟ್ಟು ಯಶ್ ಪಾಲ್ ಜೊತೆಗೆ ನಿಂತೆ. ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ನಗರಸಭೆ ನಾಮನಿರ್ದೇಶನ ಸದಸ್ಯ ಮಾಡಿದೆ. ಎರಡು ಬಾರಿ ನಗರಸಭಾ ಸದಸ್ಯ ಮಾಡಿದೆ. ಮೀನುಗಾರಿಕಾ ಫೆಡರೇಷನ್‌ಗೂ ನಾಮನಿರ್ದೇಶನ ಮಾಡಿದೆ, ನಂತರ ಅಧ್ಯಕ್ಷರಾದರು ಎಂದು ತಿಳಿಸಿದರು.
ಸ್ವತಃ ಯಡಿಯೂರಪ್ಪ ಬಳಿ ಕರೆದುಕೊಂಡು ಹೋಗಿ ಫೆಡರೇಶನ್ ಸದಸ್ಯ ಮಾಡಿದೆ, ನನಗೆ ಅವರ ಮೇಲೆ ಪ್ರೀತಿ ವಿಶ್ವಾಸ ಇಲ್ಲದೆ ಇರುತ್ತಿದ್ದರೆ ಇದೆಲ್ಲಾ ಮಾಡುತ್ತಿದ್ದನಾ? ಜಿಲ್ಲೆಯ ಅತೀ ದೊಡ್ಡ ಮಹಿಳಾ ಕಾಲೇಜಿಗೆ ಉಪಾಧ್ಯಕ್ಷ ಮಾಡಿದೆ. ನಾನು ತುಂಬಾ ಪ್ರೀತಿಯಿಂದ ಅವರನ್ನು ಬೆಳೆಸಿದ್ದೇನೆ. ನನ್ನ ದೇವಸ್ಥಾನದ ಬ್ರಹ್ಮಕಲಶಕ್ಕೂ ಅಧ್ಯಕ್ಷನಾಗಿ ಮಾಡಿದೆ. ಚುನಾವಣೆಯಲ್ಲಿ ನನ್ನ ವಾಹನದಲ್ಲಿ ಕರೆದುಕೊಂಡು ಹೋಗಿ 40 ದಿನ ಪ್ರಚಾರ ಮಾಡಿದೆ. ಬಿಜೆಪಿ ಬಿಟ್ಟು ಪಕ್ಷೇತರಾಗಲು ಮಾನಸಿಕವಾಗಿ ಯಶ್ ಪಾಲ್ ಕಾರಣ. ನಾನು ಆ ಆಘಾತದಿಂದ ಹೊರ ಬಂದಿಲ್ಲ ಎಂದರು.
ಉಡುಪಿಯಲ್ಲಿ ನಾನು ಮೂರು ಬಾರಿ ಶಾಸಕನಾಗಿದ್ದವನು. ಬಿಜೆಪಿ ನನ್ನನ್ನು ಯಾವ ರೀತಿ ನೋಡಿಕೊಳ್ಳುತ್ತಿದೆ ಎಂದು ನೆನೆದರೆ ಬೇಸರವಾಗುತ್ತದೆ. ಬಿಜೆಪಿಯ ಇತರ ನಾಯಕರು ಕೂಡ ಈ ಬಗ್ಗೆ ಯೋಚನೆ ಮಾಡಿಲ್ಲ. ನನ್ನ ಬೆಳವಣಿಗೆಯಲ್ಲಿ ಬಿಜೆಪಿಯ ಪಾತ್ರ ಇದೆ. ಹಾಗಾಗಿ ಆ ತತ್ವದಲ್ಲಿ ಇದ್ದೇನೆ. ಬಿಜೆಪಿ ಬೆಳವಣಿಗೆಯಲ್ಲಿ ನನ್ನ ಪಾತ್ರ ಇಲ್ವಾ? 1999 ರಿಂದ 23 ವರೆಗೆ ನಾನು ಅಳಿಲ ಸೇವೆ ಮಾಡಿಲ್ವಾ? ನನ್ನ ಬಗ್ಗೆ ಅವಹೇಳನ ಶಬ್ದಗಳಲ್ಲಿ ಮಾತನಾಡುತ್ತಾರೆ. ಇದು ಸಜ್ಜನ ಎಂಎಲ್ಎಗಳ ಲಕ್ಷಣ ಅಲ್ಲ. ಅವರ ವೈಯಕ್ತಿಕ ಬೆಳವಣಿಗೆಯಲ್ಲಿ ನನ್ನ ಕೊಡುಗೆ ಇದೆ. ಸ್ವಲ್ಪವಾದರೂ ಕೃತಜ್ಞತೆ ಇರಬೇಕು. ನನ್ನ ವೈಯಕ್ತಿಕ ಸೊಸೈಟಿ ವಿಚಾರ ಅಸೆಂಬ್ಲಿಯಲ್ಲಿ ಮಾತನಾಡಿದರು. ಉಡುಪಿಯ ರಾಜಕಾರಣದಲ್ಲಿ ಇಂತಹ ರಾಜಕಾರಣಿ ನೋಡಿಲ್ಲ. ನಾನು ಮಾಜಿ ಶಾಸಕರಾದ ಯುಆರ್ ಸಭಾಪತಿ, ಪ್ರಮೋದ್ ಮಧ್ವರಾಜ ಎಲ್ಲರನ್ನೂ ಫೇಸ್ ಮಾಡಿದ್ದೇನೆ. ಈ ರೀತಿಯ ದ್ವೇಷ ರಾಜಕೀಯ ಶೋಭೆಯಲ್ಲ. ಮೂರು ಬಾರಿ ಶಾಸಕನನ್ನು ನಡೆಸಿಕೊಳ್ಳುವ ರೀತಿಯಾ ಇದು? ಒಳ್ಳೆಯದಲ್ಲ.. ನಾನು ತಂದ ಸ್ಮಾರ್ಟ್ ಸಿಟಿ ಯೋಜನೆ ಅಡ್ಡಗಾಲು ಇಟ್ಟರು. ಸಿಗ್ನಲ್, ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್, ಎಲ್ಇಡಿ ಬದಲಾವಣೆ.. ಎಲ್ಲ ಯೋಜನೆಗೂ ಅಡ್ಡಿಪಡಿಸಿದ್ದಾರೆ ಎಂದು ಭಟ್ ದೂರಿದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲು: ಪರಮೇಶ್ವರ್
ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜು ಯೋಜನೆ ಪ್ರಗತಿ ಇಲ್ಲ. ಅಭಿವೃದ್ಧಿ ಕಾರ್ಯಗಳಲ್ಲಿ ಯಾರಿಗಾದರೂ ಕಿಕ್ ಬ್ಯಾಕ್ ಸಿಗುತ್ತಾ? ನಾನು ಹೋರಾಟ ಸಂಘಟನೆಗಳಿಂದಲೇ ರಾಜಕೀಯಕ್ಕೆ ಬಂದವನು. ಇದಕ್ಕೆಲ್ಲ ನಾನು ಹೆದರಿ ಕುಳಿತುಕೊಳ್ಳುವವನಲ್ಲ. ಇದರಿಂದ ಜನರಿಗೆ ಅಡ್ಡಿಯಾಗುತ್ತಿದೆ. ನಾನು ನನ್ನ ವ್ಯವಹಾರದಲ್ಲಿ ಬಿಸಿಯಾಗಿದ್ದೇನೆ. ಅಯೋಧ್ಯೆಗೆ ಹೋಗಿ ಕೆಲಸ ಮಾಡಿ ಬಂದೆ. ಈಗ ಕಾಪು ಮಾರಿಗುಡಿಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ರಘುಪತಿ ಭಟ್ ಹೇಳಿದರು.