– 4ನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ಓಲಿ
ಕಠ್ಮಂಡು: ನೇಪಾಳದ ನೂತನ ಪ್ರಧಾನಿಯಾಗಿ (Prime Minister of Nepal) ಕೆ.ಪಿ ಶರ್ಮಾ ಓಲಿ (K.P Sharma Oli) (72) ಅವರು ಸೋಮವಾರ (ಜು.15) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಅವರು 4ನೇ ಬಾರಿಗೆ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಶುಕ್ರವಾರ ನಡೆದ ವಿಶ್ವಾಸಮತ ಯಾಚನೆಯಲ್ಲಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು, ಬಹುಮತ ಸಾಬೀತು ಪಡಿಸಲು ವಿಫಲರಾದರು. ಈ ಮೂಲಕ ಪ್ರಧಾನಿ ಪಟ್ಟ ಕಳೆದುಕೊಂಡರು. ಹೀಗಾಗಿ ಹೊಸ ಸರ್ಕಾರ ರಚನೆಯ ಪ್ರಕ್ರಿಯೆಗಳು ಆರಂಭವಾಗಿತ್ತು. ಇದೀಗ ಓಲಿ ಅವರನ್ನು ನೂತನ ಪ್ರಧಾನಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ರಾಮ್ ಚಂದ್ರ ಪೌಡೆಲ್ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ-ಯುನಿಫೈಡ್ ಮಾಕ್ರ್ಸಿಸ್ಟ್ ಲೆನಿನಿಸ್ಟ್ ಅಧ್ಯಕ್ಷ ಓಲಿ ಅವರಿಗೆ ರಾಷ್ಟ್ರಪತಿ ಭವನ ಶೀತಲ್ ನಿವಾಸದಲ್ಲಿ ರಾಷ್ಟ್ರಪತಿ ಪೌಡೆಲ್ ಅವರು ಪ್ರಮಾಣವಚನ ಬೋಧಿಸಿದರು. ಇಬ್ಬರು ಉಪ ಪ್ರಧಾನಿಗಳಾದ ಪ್ರಕಾಶ್ ಮಾನ್ ಸಿಂಗ್ ಮತ್ತು ವಿಷ್ಣು ಪ್ರಕಾಶ್ ಪೌಡೆಲ್ ಹಾಗೂ ಇತರ 19 ಸಚಿವರಿಗೆ ರಾಷ್ಟ್ರಪತಿಯವರು ಪ್ರಮಾಣ ವಚನ ಬೋಧಿಸಿದರು. ಮಾನ್ ಸಿಂಗ್ ನಗರಾಭಿವೃದ್ಧಿ ಸಚಿವರಾಗಿ, ವಿಷ್ಣು ಪ್ರಕಾಶ್ ಪೌಡೆಲ್ ಹಣಕಾಸು ಸಚಿವರಾಗಿ, ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಅವರ ಪತ್ನಿ ಅರ್ಜೂ ರಾಣಾ ದೇವುಬಾ ವಿದೇಶಾಂಗ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ನೇಪಾಳ ಕಾಂಗ್ರೆಸ್‍ನಿಂದ 10 ಮಂದಿ ಕ್ಯಾಬಿನೆಟ್ ಮಂತ್ರಿಗಳಿದ್ದಾರೆ. ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ-ಯುನಿಫೈಡ್ ಮಾರ್ಕಿಸ್ಟ್ ಲೆನಿನಿಸ್ಟ್‌ನಿಂದ ಪ್ರಧಾನ ಮಂತ್ರಿಯನ್ನು ಹೊರತುಪಡಿಸಿ 8 ಮಂದಿ, ಜನತಾ ಸಮಾಜವಾದಿ ಪಕ್ಷದಿಂದ ಇಬ್ಬರು ಮತ್ತು ಲೋಕತಾಂತ್ರಿಕ ಸಮಾಜವಾದಿ ಪಕ್ಷದಿಂದ ಒಬ್ಬರಿಗೆ ಮಂತ್ರಿ ಸ್ಥಾನ ನೀಡಲಾಗಿದೆ.
ವಿದೇಶಿ ರಾಜತಾಂತ್ರಿಕರು ಮತ್ತು ಗಣ್ಯರು ಭಾಗವಹಿಸಿದ್ದ ಸಮಾರಂಭದಲ್ಲಿ ನಿರ್ಗಮಿತ ಪ್ರಧಾನಿ ಪ್ರಚಂಡ ಅವರು ಸಹ ಉಪಸ್ಥಿತರಿದ್ದರು. ಪ್ರಚಂಡ ಅವರು ವಿಶ್ವಾಸಮತ ಸೋತ ಬೆನ್ನಲ್ಲೇ, ಓಲಿಯವರು 165 ಸಂಸದರ ಬೆಂಬಲ ಪತ್ರವನ್ನು ರಾಷ್ಟ್ರಪತಿಗೆ ಸಲ್ಲಿಸಿದ್ದರು. ತಮ್ಮ ಪಕ್ಷ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್-ಯುನಿಫೈಡ್ ಮಾರ್ಕಿಸ್ಟ್ ಲೆನಿನಿಸ್ಟ್‌ನ 77 ಸಂಸದರು ಹಾಗೂ ನೇಪಾಳಿ ಕಾಂಗ್ರೆಸ್‍ನ 88 ಸಂಸದರು ಬೆಂಬಲಿಸಿದ್ದರು. ಈ ಹಿಂದೆ ಓಲಿಯವರು, 2015ರ ಅಕ್ಟೋಬರ್ 11 ರಿಂದ 2016ರ ಆಗಸ್ಟ್ 3, 2018 ಫೆಬ್ರವರಿ 5 ರಿಂದ 2021 ಜುಲೈ 13ರವರೆಗೆ ಹಾಗೂ 2021 ಮೇ 13 ರಿಂದ 2021 ಜುಲೈ 13ರ ವರೆಗೆ ಪ್ರಧಾನಿಯಾಗಿ ಆಡಳಿತ ನಡೆಸಿದ್ದರು.