ಬೆಂಗಳೂರು: ಡಿವೈಎಸ್‍ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಗುರುವಾರವಷ್ಟೇ ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ವಿರುದ್ಧ ಎಫ್‍ಐಆರ್ ದಾಖಲಿಸಿರುವ ಸಿಬಿಐ ತನಿಖೆ ಚುರುಕುಗೊಳಿಸಲಿದೆ.
ಸಿಬಿಐ ಅಧಿಕಾರಿಗಳ ತಂಡ ಇಂದು ಮಧ್ಯಾಹ್ನದೊಳಗೆ ಬೆಂಗಳೂರು ಮತ್ತು ಮಡಿಕೇರಿಗೆ ತಲುಪುವ ಸಾಧ್ಯತೆ ಇದ್ದು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ. ಜಾರ್ಜ್, ಗುಪ್ತಚರ ದಳ ಡಿಜಿ ಪ್ರಣವ್ ಮೊಹಾಂತಿಗೆ ಎರಡು ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡೋ ಸಾಧ್ಯತೆ ಇದೆ.
ಇತ್ತ ಬಂಧನದ ಭೀತಿಯಲ್ಲಿರುವ ಜಾರ್ಜ್ ಕೂಡಾ ಇಂದೇ ಕೋರ್ಟ್‍ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಬಹುದು. ನಾನು ಸಮಾಜದಲ್ಲಿ ಗುರುತಿಸಿಕೊಂಡಿರುವ ಪ್ರತಿಷ್ಠಿತ ವ್ಯಕ್ತಿಯಾಗಿದ್ದು, ಬಂಧನವಾದ್ರೆ ಮಾನಹಾನಿಯಾಗುತ್ತೆ ಅಂತಾ ವಾದಿಸಿ ನಿರೀಕ್ಷಣಾ ಜಾಮೀನು ಕೋರಬಹುದು. ಆಗ ಸಿಬಿಐ ಜಾರ್ಜ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಬಹುದು.
ನಿರೀಕ್ಷಣಾ ಜಾಮೀನು ನೀಡಿದ್ರೆ ಮೂವರು ಆರೋಪಿಗಳು ಪ್ರಭಾವಿಗಳಾಗಿರುವ ಕಾರಣ ಸಾಕ್ಷ್ಯನಾಶ ಮತ್ತು ಒತ್ತಡ ಹೇರುವ ಸಾಧ್ಯತೆ ಇದೆ ಅನ್ನೋ ವಾದವನ್ನು ಸಿಬಿಐ ವಕೀಲರು ಮಂಡಿಸಬಹುದು. ಹೀಗಾಗಿ ಬಂಧನಕ್ಕೆ ಅವಕಾಶ ನೀಡುವಂತೆ ಮನವಿ ಮಾಡಬಹುದು. ಅಲ್ಲದೇ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ವಿಚಾರಣೆ ಮುಗಿಯುವವರೆಗೆ ಅಮಾನತಿನಲ್ಲಿಡುವಂತೆ ಕೋರಬಹುದು ಎಂಬುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: ಡಿವೈಎಸ್ಪಿ ಗಣಪತಿ ಕೇಸಲ್ಲಿ ಸಿಬಿಐ ಎಫ್.ಐ.ಆರ್ – ಮತ್ತೆ ಸಂಕಷ್ಟದಲ್ಲಿ ಜಾರ್ಜ್
ಸಿಬಿಐನಿಂದ ಎಫ್‍ಐಆರ್ ದಾಖಲಾಗಿರೋ ಹೊರತಾಗಿಯೂ ಕಾಂಗ್ರೆಸ್ ಸಚಿವ ಜಾರ್ಜ್ ರಾಜೀನಾಮೆ ಪಡೆಯೋ ಸಾಧ್ಯತೆ ಇಲ್ಲ. ಇದು ನಮ್ಮ ನಾಯಕರ ವಿರುದ್ಧ ಪ್ರಧಾನಿ ಮೋದಿ ಸರ್ಕಾರ ಮಾಡ್ತಿರೋ ಕುತಂತ್ರ. ಚುನಾವಣೆ ಹೊತ್ತಲ್ಲಿ ಪ್ರತೀಕಾರದ ರಾಜಕಾರಣ ಮಾಡ್ತಿದೆ ಅಂತಾ ಕಾಂಗ್ರೆಸ್ ವಾದಿಸ್ತಿದೆ.
ಈ ಹಿಂದೆ ಸಿಐಡಿ ತನಿಖೆ ಕೈಗೊಂಡಿದ್ದಾಗ ಜಾರ್ಜ್ ರಾಜೀನಾಮೆ ನೀಡಿದ್ರು. ಈಗ ಮತ್ತೊಮ್ಮೆ ರಾಜೀನಾಮೆ ನೀಡಿ ನಾವಾಗಿಯೇ ಬಿಜೆಪಿ ಕೈಗೆ ಮತ್ತೊಂದು ಅಸ್ತ್ರ ನೀಡೋದು ಬೇಡ ಅನ್ನೋದು ಕೈ ಲೆಕ್ಕಾಚಾರ. ಸುಪ್ರೀಂಕೋರ್ಟ್ ಸೂಚನೆಯಂತೆ ತನಿಖೆ ನಡೆಸಿ ಮೂರು ತಿಂಗಳೊಳಗೆ ಸಿಬಿಐ ವರದಿ ಸಲ್ಲಿಸಬೇಕು. ಆಗ ಒಂದು ವೇಳೆ ತಪ್ಪಿತಸ್ಥ ಅಂತಾ ಸಾಬೀತಾದಲ್ಲಿ ಮಾತ್ರ ರಾಜೀನಾಮೆ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ. ಪಕ್ಷದ ನಾಯಕರ ಈ ಅಭಿಪ್ರಾಯಕ್ಕೆ ಸಿಎಂ ಸಿದ್ದರಾಮಯ್ಯ ಕೂಡಾ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.