– ಬಂಧನ ವಾರೆಂಟ್ ಹೊರಡಿಸೋದಾಗಿ ಎಚ್ಚರಿಕೆ
ಬೆಂಗಳೂರು: 2013ರ ಕೆಜಿಎಫ್ ಗಲಾಟೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ಸಚಿವ ಕೆ.ಹೆಚ್ ಮುನಿಯಪ್ಪ (K.H. Muniyappa) ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Court) ಜಾಮೀನು ಮಂಜೂರು ಮಾಡಿದೆ.
2013ರ ವಿಧಾನಸಭಾ ಚುನಾವಣೆಯ ವೇಳೆ ಕೆಜಿಎಫ್‍ನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿ.ಶಂಕರ್ ಅವರ ಮೇಲೆ, ಆಗ ಸಂಸದರಾಗಿದ್ದ ಮುನಿಯಪ್ಪ ಹಾಗೂ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಹಲ್ಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಮುನಿಯಪ್ಪ ಅವರು ಹಾಜರಾಗದೇ ಇದ್ದಿದ್ದಕ್ಕೆ, ವಿಚಾರಣೆಗೆ ಹಾಜರಾಗದಿದ್ದರೆ ಬಂಧನ ವಾರೆಂಟ್ ಹೊರಡಿಸುವುದಾಗಿ ನ್ಯಾಯಮೂರ್ತಿ ಗಜಾನನ ಭಟ್ ಎಚ್ಚರಿಕೆ ನೀಡಿದರು. ಬಳಿಕ ಲಕ್ಷ್ಮೀ ನಾರಾಯಣ್ ಮತ್ತು ಮುನಿಯಪ್ಪ ಇಬ್ಬರೂ ನ್ಯಾಯಾಲಯಕ್ಕೆ ಹಾಜರಾದರು.
ವಿಚಾರಣೆ ವೇಳೆ ನ್ಯಾಯಾಧೀಶರು, ಕಾನೂನಿನ ದೃಷ್ಟಿಯಲ್ಲಿ ಜಾಮೀನು ಕೊಡೋಕೆ ಆಗಲ್ಲ. ಕಸ್ಟಡಿಗೆ ಕೊಡೋಣ ಎಂದರು. ಆದರೆ ಜಾಮೀನು ಮಂಜೂರು ಮಾಡುವಂತೆ ವಕೀಲರು ಮನವಿ ಮಾಡಿದರು. ಇದಕ್ಕೆ ನ್ಯಾಯಮೂರ್ತಿಗಳು ಕಾನೂನಿನಲ್ಲಿ ಅವಕಾಶ ಇದ್ದರೆ ಹೇಳಿ ಎಂದು ಪ್ರಶ್ನಿಸಿದರು. ಅಲ್ಲದೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದೀರಿ. ಮ್ಯಾಜಿಸ್ಟ್ರೇಟ್ ಮುಂದೆ ಹಾಕಿದ ಹಾಗೆ ಅರ್ಜಿ ಹಾಕಿದ್ದೀರಿ ಎಂದು ವಕೀಲರಿಗೆ ತರಾಟೆ ತೆಗೆದುಕೊಂಡರು. ಬಳಿಕ ಮುನಿಯಪ್ಪ ಅವರಿಗೆ, 50 ಸಾವಿರ ರೂ. ಶ್ಯೂರಿಟಿಯೊಂದಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಮತ್ತೋರ್ವ ಆರೋಪಿ ಲಕ್ಷ್ಮೀ ನಾರಾಯಣ್‌ಗೆ ಕಸ್ಟಡಿಗೆ ನೀಡಿ ಆದೇಶ ಹೊರಡಿಸಲಾಗಿದೆ.