ಬೆಂಗಳೂರು: ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ಹಾಸನ ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಇಂದು ಮುಂಜಾನೆ ವೀಡಿಯೋ ಕರೆ ಮೂಲಕ ಮಾತನಾಡಿ ಧೈರ್ಯ ತುಂಬಿದರು.
ಹಾಸನ ಜಿಲ್ಲೆಯ ಬೆಂಗಳೂರಿನ ನಿವಾಸಿ ಪೂರ್ಣ ಅವರೊಂದಿಗೆ ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಮಾತನಾಡಿದ ಗೋಪಾಲಯ್ಯ ಅವರು, ಯಾವುದೇ ರೀತಿಯ ಸಂದರ್ಭ ಬಂದರೂ ಧೈರ್ಯಗೆಡದೆ ಆತ್ಮಸ್ಥೈರ್ಯದಿಂದ ಎಲ್ಲ ಕಷ್ಟಗಳನ್ನು ಎದುರಿಸಲು ಸಲಹೆ ನೀಡಿದರು. ಇದನ್ನೂ ಓದಿ: ಮೆಟ್ರೋ ನಿಲ್ದಾಣದ ಗ್ರಿಲ್‍ನಲ್ಲಿ ಸಿಲುಕಿದ್ದ ಬಾಲಕಿ ರಕ್ಷಿಸಿದ CISF ಸಿಬ್ಬಂದಿ!
ಯುದ್ಧ ಪೀಡಿತ ನಗರದಲ್ಲಿ ನೀರು, ಆಹಾರ, ರಕ್ಷಣೆ ಇತರೆ ಮೂಲಭೂತ ಸೌಕರ್ಯಗಳ ಲಭ್ಯತೆ ಕುರಿತು ಮಾಹಿತಿ ಪಡೆದ ಸಚಿವರು, ಅವಕಾಶ ಸಿಕ್ಕಾಗ ಸಾಧ್ಯವಾದಷ್ಟು ಹೆಚ್ಚು ನೀರು ಮತ್ತು ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ತಿಳಿಸಿದರು. ಇದರ ಜೊತೆಗೆ ಯಾವುದೇ ಸಮಯದಲ್ಲಾದರೂ ಕೂಡ ತಮ್ಮ ದೂರವಾಣಿ ಸಂಖ್ಯೆಗೆ ಕರೆ ಮಾಡಲು ತಿಳಿಸಿದರು.
ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳು ಯುಕ್ರೇನ್‍ನಲ್ಲಿರುವ ವಿದ್ಯಾರ್ಥಿಗಳು ಮತ್ತು ಭಾರತೀಯ ನಾಗರೀಕರನ್ನು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸುರಕ್ಷಿತವಾಗಿ ಕರೆ ತಂದಿದೆ. ಉಳಿದವರನ್ನು ಕರೆತರುವ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ನಿಮ್ಮನ್ನು ಕೂಡ ಶೀಘ್ರವೇ ಕರೆ ತರಲು ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು. ಇದನ್ನೂ ಓದಿ: ಪುರುಷನ ವೇಷಧರಿಸಿ ಕಳ್ಳತನ ಮಾಡಲು ಬಂದ ಯುವತಿ ಅರೆಸ್ಟ್!
ಇದೇ ವೇಳೆ ಬೆಳಗಾವಿ ಜಿಲ್ಲೆಯ ಅಥಣಿ ರಕ್ಷಿತ್ ವಿದ್ಯಾರ್ಥಿಯೊಂದಿಗೂ ಕೂಡ ಮಾತನಾಡಿದ ಸಚಿವರು, ನಿಮ್ಮ ಜೊತೆಯಲ್ಲಿರುವ ಎಲ್ಲರಿಗೂ ಧೈರ್ಯದಿಂದ ಇರಲು ತಿಳಿಸಿದರು. ಬೆಂಗಳೂರಿನ ಮಾಗಡಿ ರಸ್ತೆಯ ಕಾರ್ತಿಕ್ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳ ವಿದ್ಯಾರ್ಥಿಗಳ ಜೊತೆ ಮಾತನಾಡಿದರು.