ಮಂಡ್ಯ: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಾಜಿ ಶಾಸಕನ ಸಹೋದರರು ಪಿಎಸ್‍ಐಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಕೆ.ಆರ್ ಪೇಟೆ ಕಾಂಗ್ರೆಸ್ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ಅವರ ಸಹೋದರರಾದ ಕೆ.ಬಿ ರವಿ ಹಾಗೂ ಕೆ.ಬಿ ಈಶ್ವರ್ ಪ್ರಸಾದ್ ಕೆ.ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‍ಐ ಬ್ಯಾಟರಾಯಗೌಡರಿಗೆ ಬೆದರಿಕೆ ಹಾಕಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಹಲ್ಲೆಗೆ ಮುಂದಾಗಿದ್ದರು ಎಂದು ಈ ಇಬ್ಬರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
Advertisement
Advertisement
ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಧ್ಯರಾತ್ರಿ 2:15ರ ಸುಮಾರಿಗೆ ರವಿ ಹಾಗೂ ಈಶ್ವರ್ ಪ್ರಸಾದ್‍ಗೆ ಪಾರ್ಟಿ ಮುಗಿಸಿ ಮನೆಗೆ ತೆರಳುವಂತೆ ಪಿಎಸ್‍ಐ ಬ್ಯಾಟರಾಯಗೌಡ ಅವರು ಹೇಳಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಇದ್ದ ರವಿ ಹಾಗೂ ಈಶ್ವರ್ ಪ್ರಸಾದ್ ಪಿಎಸ್‍ಐ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ್ದಾರೆ.
Advertisement
ಜನವರಿ 1ರಂದು ಈ ಇಬ್ಬರ ಮೇಲೂ ಕೆ.ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿ ಆರೋಪದ ಅಡಿ ದೂರು ದಾಖಲಿಸಿದ್ದು ಎಫ್‍ಐಆರ್ ದಾಖಲಾಗಿದೆ. ಸದ್ಯ ರವಿ ಪರಾರಿಯಾಗಿದ್ದು, ಈಶ್ವರ್ ಪ್ರಸಾದ್ ಪೊಲೀಸರ ವಶದಲ್ಲಿ ಇದ್ದಾರೆ. ಈ ಬಗ್ಗೆ ಗುರುವಾರ ಜಾಮೀನಿಗೆ ಆರೋಪಿಗಳು ಅರ್ಜಿ ಸಲ್ಲಿಸಿದ್ದು, ಸೆಷನ್ ಕೋರ್ಟ್ ಅರ್ಜಿಯನ್ನು ನಿರಾಕರಿಸಿದೆ.