ತಂದೆಯ ಹುಟ್ಟುಹಬ್ಬದಂದೇ ‘ಕೈ’ಗೆ ರಾಜೀನಾಮೆ – ಮೋದಿ ಸಂಪುಟದಲ್ಲಿ ಸಿಂಧಿಯಾ ಮಂತ್ರಿ?

Public TV
2 Min Read
jyotiraditya scindia bjp

– 20 ಮಂದಿ ಕೈ ಶಾಸಕರು ರಾಜೀನಾಮೆ
– ಶಾಸಕರ ಜೊತೆ ಸಿಂಧಿಯಾ ಶೀಘ್ರವೇ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಮಧ್ಯಪ್ರದೇಶದಲ್ಲಿ ಕಮಲನಾಥ್ ಸರ್ಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮೋದಿ ಸರ್ಕಾರದಲ್ಲಿ ಮಂತ್ರಿ ಆಗಲಿದ್ದಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.

ಹೌದು. ಇಂದು ಬೆಳಗ್ಗೆ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಂಧಿಯಾ ಭೇಟಿಯಾಗಿದ್ದರು. ಭೇಟಿಯಾದ ನಂತರ ಸಿಂಧಿಯಾ ಅವರು ಅಧಿಕೃತವಾಗಿ ಕಾಂಗ್ರೆಸ್ಸಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಜ್ಯೋತಿರಾಧಿತ್ಯ ಸಿಂಧಿಯಾ ರಾಜೀನಾಮೆ ನೀಡುತ್ತಿದ್ದಂತೆ ಮಧ್ಯಪ್ರದೇಶ 20 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್ ನಲ್ಲಿರುವ ಶಾಸಕರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಲಾಲ್ಜಿ ಟಂಡನ್ ಅವರಿಗೆ ರವಾನಿಸಿದ್ದಾರೆ.

jyotiraditya scindia madhya pradesh congress mla

ಮೂಲಗಳ ಪ್ರಕಾರ ಸಿಂಧಿಯಾ ಹಲವು ದಿನಗಳ ಹಿಂದೆಯೇ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಬೇಕಿತ್ತು. ಆದರೆ ರಾಜೀನಾಮೆ ನೀಡಲಿರುವ ಕೈ ಶಾಸಕರ ನಿರ್ಧಾರ ಸ್ಪಷ್ಟವಾಗದ ಕಾರಣ ರಾಜೀನಾಮೆ ದಿನಾಂಕ ಮುಂದೂಡಿಕೆಯಾಗಿತ್ತು. ವಿಶೇಷ ಏನೆಂದರೆ ಇಂದು ಸಿಂಧಿಯಾ ಅವರ ತಂದೆ ಮಾಧವ್ ರಾವ್ ಸಿಂಧಿಯಾ ಅವರ ಜನ್ಮದಿನವಾಗಿದೆ. ಮಾಧವ್ ರಾವ್ ಈ ಹಿಂದೆ ರಾಜೀವ್ ಗಾಂಧಿ ಮತ್ತು ಪಿವಿ ನರಸಿಂಹ ರಾವ್ ಅವರ ಸರ್ಕಾರದಲ್ಲಿ ಕೇಂದ್ರ ಮಂತ್ರಿ ಆಗಿದ್ದರು.

ಮೂಲಗಳ ಪ್ರಕಾರ ಸಿಂಧಿಯಾ ಅವರಿಗೆ ಮಂತ್ರಿ ಸ್ಥಾನ ನೀಡುವ ಆಫರ್ ಅನ್ನು ಬಿಜೆಪಿ ಹೈಕಮಾಂಡ್ ನೀಡಿದೆ. ರಾಜ್ಯಸಭೆಯ ಮೂಲಕ ಆಯ್ಕೆ ಮಾಡಿ ಮಂತ್ರಿ ಸ್ಥಾನ ನೀಡವುದಾಗಿ ಹೇಳಿದ್ದು, ಈ ಆಫರ್ ಅನ್ನು ಸಿಂಧಿಯಾ ಒಪ್ಪಿಕೊಂಡಿದ್ದಾರೆ.

230 ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಇಬ್ಬರು ಶಾಸಕರ ನಿಧನದಿಂದ ಸದ್ಯ 228 ಶಾಸಕರಿದ್ದಾರೆ. ಸದ್ಯ 20 ಮಂದಿ ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ಸಿಎಂ ಕಮಲನಾಥ್ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಬಹುಮತ ಸಾಬೀತು ಪಡಿಸಲು 105 ಶಾಸಕರ ಬೆಂಬಲ ಬೇಕಿದೆ. ಕಾಂಗ್ರೆಸ್ ಬಳಿ 95 ಮಂದಿ ಶಾಸಕರಿದ್ದು ಬಿಜೆಪಿ 107 ಸ್ಥಾನಗಳನ್ನು ಹೊಂದಿದೆ. ಅಲ್ಲದೇ ಕೆಲವು ಪಕ್ಷೇತರ ಶಾಸಕರ ನೆರವು ಬಿಜೆಪಿಗೆ ಸಿಗುವ ಸಾಧ್ಯತೆ ಇದೆ.

ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತೆ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.

ಒಟ್ಟು 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಪಕ್ಷೇತರ 1, ಬಿಎಸ್‍ಪಿ 2, ಎಸ್‍ಪಿ 2 ಕ್ಷೇತ್ರದಲ್ಲಿ ಜಯಗಳಿಸಿತ್ತು. 2019ರ ಲೋಕಸಭಾ ಚುನಾವಣೆಯ ಒಟ್ಟು 29 ಕ್ಷೇತ್ರಗಳ ಪೈಕಿ ಬಿಜೆಪಿ 28 ರಲ್ಲಿ ಗೆದ್ದಿದ್ದರೆ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *