ಬೆಂಗಳೂರು: ಮದುವೆಯಾದ ಕೇವಲ 25 ದಿನದಲ್ಲೇ 24 ವರ್ಷದ ಬಿಪಿಒ(ಹೊರಗುತ್ತಿಗೆ ಸೇವಾ ಕ್ಷೇತ್ರ) ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಹಲಸೂರು ನಿವಾಸಿ ಆರ್ ಶಂಕರ್ ಆತ್ಮಹತ್ಯೆಗೆ ಶರಣಾಗಿರುವ ಉದ್ಯೋಗಿಯಾಗಿದ್ದು, ಈತ ತನ್ನ 19 ವರ್ಷದ ತನ್ನ ಪತ್ನಿ ಲಕ್ಷಿತಾಳ ನಿರಂತರ ಕಿರುಕುಳ ಹಾಗೂ ತವರು ಮನೆಗೆ ತೆರಳಿ ವಾಪಸ್ಸಾಗದೇ ಇರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಶಂಕರ್ ಮದುವೆಗೂ ಮುನ್ನ ತನ್ನದೇ ಪ್ರದೇಶದ ನಿವಾಸಿ ಲಕ್ಷಿತಾ ಎಂಬಾಕೆಯನ್ನು ಪ್ರೀತಿಸುತ್ತಿದ್ದನು. ಮದುವೆಯ ಬಳಿಕ ಆಕೆ ತನ್ನ ಹೆತ್ತವರ ಮನೆಗೆ ತೆರಳಿ ವಾಪಸ್ಸಾಗಿಲ್ಲ. ಅಲ್ಲದೆ ಶಂಕರ್ ಕರೆ ಮತ್ತು ಮೆಸೇಜ್ ಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸುತ್ತಿದ್ದಳು. ಇದರಿಂದ ನೊಂದಿದ್ದ ಶಂಕರ್, ಕಳೆದ ಭಾನುವಾರ ವಿಷ ಸೇವಿಸುವುದಾಗಿ ಪತ್ನಿಗೆ ಮೆಸೇಜ್ ಮಾಡಿದ್ದಾನೆ. ಆದರೆ ಆಕೆ ಈ ಮೆಸೇಜ್‍ಗೂ ಪ್ರತಿಕ್ರಿಯಿಸಿಲ್ಲ. ಅಲ್ಲದೆ ಪತಿಯ ಮನೆಗೂ ವಾಪಸ್ಸಾಗಿರಲಿಲ್ಲ.
ಪತ್ನಿಯ ನಡತೆಯಿಂದ ಮತ್ತಷ್ಟು ನೊಂದ ಶಂಕರ್, ತಾನು ಸೇವಿಸುತ್ತಿರುವ ವಿಷದ ಬಾಟಲಿಯ ಫೋಟೋ ತೆಗೆದು ಪತ್ನಿಗೆ ಕಳುಹಿಸಿದ್ದಾನೆ. ಆದರೂ ಆಕೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸದೇ ಪತಿ ವಿಷ ಕುಡಿದರೆ ಕುಡಿದು ಸಾಯಲಿ ಎಂದು ಸುಮ್ಮನಾಗಿದ್ದಾಳೆ. ಇತ್ತ ಪತ್ನಿ ಯಾವುದಕ್ಕೂ ಪ್ರತಿಕ್ರಿಯೆ ನೀಡದಿದ್ದರಿಂದ ಬೇಸತ್ತ ಪತಿ ಶಂಕರ್ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಗನ ಆತ್ಮಹತ್ಯೆಯ ಮರುದಿನವೇ ಶಂಕರ್ ತಂದೆ ಸೊಸೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೂಡ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ಶಂಕರ್ ಪತ್ನಿ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಬಿಬಿಎ (ವ್ಯವಹಾರ ಆಡಳಿತ ಅಧ್ಯಯನ) ಪದವಿ ಪಡೆದಿರೋ ಶಂಕರ್, ಇತ್ತೀಚೆಗಷ್ಟೇ ಮರತ್ತಹಳ್ಳಿಯಲ್ಲಿ ಬಿಪಿಒ ಆಗಿ ಕೆಲಸಕ್ಕೆ ಸೇರಿದ್ದನು. ಶಂಕರ್ ಹಾಗೂ ಲಕ್ಷಿತ ಕಳೆದ ಒಂದು ವರ್ಷದ ಹಿಂದೆ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಇದೇ ವರ್ಷದ ಏಪ್ರಿಲ್ 18 ರಂದು ವಿವಾಹವಾಗಿದ್ದರು.
ನನ್ನ ಮಗ ಆಕೆಯನ್ನು ಪ್ರೀತಿಸುತ್ತಿದ್ದ ಸಂದರ್ಭದಲ್ಲಿ ಸೊಸೆಯ ಸಹೋದರ ಹಾಗೂ ಆತನ ಸಹಪಾಠಿಗಳು ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಲಕ್ಷಿತ, ನನ್ನ ಮನೆಗೆ ಬಂದು ನಾನು ನನ್ನ ಮನೆಗೆ ಹೋಗಲ್ಲ ಎಂದು ಹಠ ಹಿಡಿದು ಕುಳಿತಿದ್ದಳು. ಹೀಗಾಗಿ ಇವರಿಬ್ಬರಿಗೆ ದೇವಸ್ಥಾನವೊಂದರಲ್ಲಿ ಮದುವೆ ಮಾಡಿಸಿದೆ. ಆದರೆ ಇವರಿಬ್ಬರು ಕಾನೂನಾತ್ಮಕವಾಗಿ ಕಳೆದ 25 ದಿನದ ಹಿಂದೆ ಸತಿ-ಪತಿಗಳಾದರು. ಮದುವೆಯಾದ ಕೆಲ ದಿನಗಳ ಬಳಿಕ ನಾನು ತವರು ಮನೆಗೆ ಹೋಗುವುದಾಗಿ ಹೇಳಿದಳು. ಹೀಗಾಗಿ ಮನೆಗೆ ತೆರಳಿದ ಬಳಿಕ ಆಕೆ, ತನ್ನ ಕುಟುಂಬದವರೊಂದಿಗೆ ಸೇರಿ ವಿಲಕ್ಷಣವಾಗಿ ವರ್ತಿಸಲು ಆರಂಭಿಸಿದ್ದಾಳೆ. ಅಲ್ಲದೆ ನಾವು ಬೇರೆ ಮನೆ ಮಾಡಿ ಇರುವ ಎಂದು ನನ್ನ ಮಗನನ್ನು ಪೀಡಿಸಲು ಆರಂಭಿಸಿದ್ದಾಳೆ. ಈ ಎಲ್ಲಾ ಬೆಳವಣಿಗೆಗಳಿಂದ ಮದುವೆಯಾದ 25 ದಿನಕ್ಕೇ ನನ್ನ ಮಗ, ಪತ್ನಿಯಿಂದ ಕಿರುಕುಳ ಆರಂಭಿಸಿದ್ದಾನೆ. ಪತ್ನಿ ಫೋನ್ ರಿಸೀವ್ ಮಾಡದೇ ಮೆಸೇಜ್ ಗೂ ರಿಪ್ಲೈ ಮಾಡದೇ ಇರುವುದರಿಂದ ಆತ ಬಹಳಷ್ಟು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರಜನ್ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ವಿಷ ಸೇವಿಸಿದ ಬಳಿಕ ಶಂಕರ್, ತಾನು ಅವಳಿಲ್ಲದೆ ಬದುಕಲ್ಲ ಎಂದು ತನ್ನ ಗೆಳೆಯರಿಗೆ ಕರೆ ಮಾಡಿ ನೋವು ತೋಡಿಕೊಂಡಿದ್ದಾನೆ. ಕೂಡಲೇ ಆತನ ಗೆಳೆಯರು ಶಂಕರ್ ಇದ್ದಲ್ಲಿಗೆ ದೌಡಾಯಿಸಿ ನಗರ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಅದಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಆ ಬಳಿಕ ಗೆಳೆಯರು ಶಂಕರ್ ತಂದೆಗೆ ವಿಷಯ ತಿಳಿಸಿದ್ದಾರೆ.
ಈ ಸಂಬಂಧ ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.