ಯೋಗಾ ಯೋಗ – ಶರೀರ, ಮನಸ್ಸಿನ ಆರೋಗ್ಯದ ಕೊಂಡಿ ಯೋಗ

Public TV
3 Min Read
Yoga Day 2

– ಯೋಗದ ಮಹತ್ವ ನಿಮಗೆಷ್ಟು ಗೊತ್ತು?

ಪ್ರತಿ ವರ್ಷ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನ (International Yoga Day) ವಿಶ್ವದಾದ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡ, ದೈಹಿಕ ಸೌಂದರ್ಯ ಮತ್ತು ಸಮತೋಲನ, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ಯೋಗದ ಮೊರೆ ಹೋಗುತ್ತಿದ್ದಾರೆ. ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ಪ್ರಖ್ಯಾತಿ ಪಡೆದಿದ್ದು, ಪ್ರತಿ ವರ್ಷವೂ ಜಾಗೃತಿ ಮೂಡಿಸುವ ಉದ್ದೇಶದಿಂದ ಒಂದೊಂದು ವಸ್ತು ವಿಷಯಗಳನ್ನ ಆಯ್ಕೆ ಮಾಡಲಾಗುತ್ತದೆ. ಈ ಬಾರಿ `ವಸುದೈವ ಕುಟುಂಬಕಂ’ ಥೀಮ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

Yoga Day

ಈ ಯೋಗವನ್ನು ಭಾರತವು ವಿಶ್ವಕ್ಕೆ ನೀಡಿದ ಮಹತ್ವದ ಕೊಡುಗೆಯಾಗಿದೆ. ಹೌದು. 6,000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವೂ ಆಗಿರುವ ಯೋಗವು ದೇಹ ಮತ್ತು ಮನಸ್ಸನ್ನು ಸಂಪರ್ಕಿಸುವ ಪ್ರಾಚೀನ ಕಲೆಯೂ ಆಗಿದೆ. ಯೋಗ, ಧ್ಯಾನ, ಸಭೆಗಳು ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಅಭ್ಯಾಸ ಮಾಡುವ ಮೂಲಕ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗ ದಿನವನ್ನ ಪ್ರತಿವರ್ಷ ಆಚರಿಸಲಾಗುತ್ತದೆ.

2015 ಜೂನ್ 21ರಂದು ಮೊದಲ ಬಾರಿಗೆ ಯೋಗ ದಿನವನ್ನ ಆಚರಿಸಲಾಯಿತು. ರಾಷ್ಟ್ರ ರಾಜಧಾನಿಯ ರಾಜಪಥದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಹೊಸ ದಾಖಲೆಯನ್ನೂ ಬರೆಯಿತು. 2015 ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸ್ಮರಣಾರ್ಥವಾಗಿ ಭಾರತೀಯ ರಿಸರ್ವ್ ಬ್ಯಾಂಕ್ 10 ರೂಪಾಯಿಯ ನಾಣ್ಯವನ್ನೂ ಸಹ ಬಿಡುಗಡೆ ಮಾಡಿತು.

International Yoga Day Mysuru Narendra Modi 5

ವಿಶ್ವ ಯೋಗದಿನದ ಐತಿಹಾಸಿಕ ಕ್ಷಣ ನೆನಪಿದೆಯಾ?
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನ 2014ರ ಡಿಸೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಭಾರತದ ಖಾಯಂ ಪ್ರತಿನಿಧಿಯಾಗಿರುವ ಅಶೋಕ್ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದವು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಪ್ರಸ್ತಾವನೆಗೆ ಅನುಮೋದನೆಯನ್ನು ನೀಡಿದ್ದವು.

200619kpn90 e1579076070131

ಮೊದಲ ಯೋಗ ದಿನ ಆಚರಣೆ ನಡೆದಿದ್ದು ಯಾವಾಗ?
2015ರ ಜೂನ್ 21ರಂದು ಚೊಚ್ಚಲ ಅಂತಾರಾಷ್ಟ್ರೀಯ ಯೋಗ ದಿನವನ್ನ ಆಚರಿಸಲಾಯಿತು. ಆಯುಶ್ ಸಚಿವಾಲಯದ ನೇತೃತ್ವದಲ್ಲಿ ರಾಜಪಥದಲ್ಲಿ ವಿಜೃಂಭಣೆಯಿಂದ ಯೋಗದಿನವನ್ನ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ 84 ರಾಷ್ಟ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, 21 ಯೋಗ ಆಸನಗಳನ್ನ ಅಭ್ಯಸಿಸಿದ್ದರು.

Modi Yoga

ಯೋಗದ ಮಹತ್ವ ನಿಮಗೆಷ್ಟು ಗೊತ್ತು?
ಯೋಗದಿಂದ ಹೆಚ್ಚು ಆರೋಗ್ಯ ಪ್ರಯೋಜನಗಳು ಇವೆ ಎಂಬ ಕಾರಣಕ್ಕೆ ಇಂದು ಅನೇಕ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿವೆ. ಯೋಗವು ಮನಸ್ಸು, ದೇಹ ಎಲ್ಲದರ ಶುದ್ಧೀಕರಣಕ್ಕೆ ನೆರವಾಗುತ್ತದೆ. ಯೋಗವು ನಮ್ಮನ್ನ ನೈಜತೆಯ ಹತ್ತಿರಕ್ಕೆ ಕರೆದೊಯ್ಯುತ್ತದೆ. ಯೋಗವು ವ್ಯಾಯಮ ಮಾತ್ರವಲ್ಲದೇ ನಿಮ್ಮೊಂದಿಗೆ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಕೊಳ್ಳಲು ನೆರವಾಗುತ್ತದೆ. ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹವಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನ ಸುಧಾರಿಸಲು ಸಹಾಯ ಮಾಡುತ್ತದೆ. ಯೋಗವು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನ ಒಗ್ಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯನ ನಡುವೆ ಸಾಮರಸ್ಯ ಮೂಡಿಸುವ ಜೊತೆಗೆ ಮನುಷ್ಯನಲ್ಲಿ ಸಕಾರಾತ್ಮಕ ಭಾವನೆಯುಂಟು ಮಾಡಲು ಸಹಕರಿಸುತ್ತದೆ.

International Yoga Day Mysuru Narendra Modi 4

ಜೂನ್ 21 ರಂದೇ ಯೋಗ ದಿನಾಚರಣೆ ಏಕೆ?
ಜೂನ್ 21 ಉತ್ತರ ಗೋಳಾರ್ಧದ ವರ್ಷದ ಅತಿ ದೀರ್ಘವಾದ ದಿನವಾಗಿದೆ. ಈ ದಿನವನ್ನು ಬೇಸಿಗೆ ಆಯನ ಸಂಕ್ರಾಂತಿ ದಿನವೆಂದು ಅಂದರೆ ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನವೆಂದು ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಇದು ದಕ್ಷಿಣಯಾನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತದೆ. ದಕ್ಷಿಣ ಯಾನವನ್ನ ಆಧ್ಯಾತ್ಮಿಕ ಅಭ್ಯಾಸಗಳಿಗೆ ನೈಸರ್ಗಿಕ ಬೆಂಬಲವೆಂದು ಪರಿಗಣಿಸಲಾಗುತ್ತದೆ. ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು ದಿವ್ಯ ಶಕ್ತಿ ಉದ್ದೀಪನಗೊಳಿಸುತ್ತದೆ ಎಂದು ಈ ದಿನವನ್ನು ನಂಬಲಾಗಿದೆ. ಬೇಸಿಗೆ ಆಯನ ಸಂಕ್ರಾAತಿಯ ಬಳಿಕ ಮೊದಲ ಹುಣ್ಣಿಮೆಯನ್ನ ಗುರು ಪೂರ್ಣಿಮೆ ಎಂದು ಕರೆಯಲಾಗುತ್ತದೆ.

Share This Article