Connect with us

International

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರಿದ, ಶಾರ್ಕ್ ಹಿಂಬಾಲಿಸ್ತು! ಮುಂದೇನಾಯ್ತು ಅಂತ ಕೇಳಿದ್ರೆ ಅಚ್ಚರಿಪಡ್ತೀರ

Published

on

ವಾಷಿಂಗ್ಟನ್: ವ್ಯಕ್ತಿಯೊಬ್ಬ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರಿದ್ದು, ಶಾರ್ಕ್‍ವೊಂದು ಆತನನ್ನು ಹಿಂಬಾಲಿಸಿ ಕೊನೆಗೆ ಪೊಲೀಸರೇ ಆತನನ್ನು ಕಾಪಾಡಿದ ವಿಚಿತ್ರ ಘಟನೆ ಅಮೆರಿಕದಲ್ಲಿ ನಡೆದಿದೆ.

ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಬುಧವಾರದಂದು ನಾರ್ತ್ ಕ್ಯಾರೊಲಿನಾದ ಸರ್ಫ್ ಸಿಟಿಯಲ್ಲಿ 20 ವರ್ಷದ ಝಚಾರಿ ಕಿಂಗ್ಸ್ ಬರಿನನ್ನು ಟ್ರಾಫಿಕ್ ಪೊಲೀಸರು ತಡೆದಿದ್ರು. ಕಿಂಗ್ಸ್ ಬರಿ ಕಾರಿನಲ್ಲಿ ನಿಷೇಧಿತ ವಸ್ತುವೊಂದನ್ನ ಅಕ್ರಮವಾಗಿ ಇಟ್ಟುಕೊಂಡಿದ್ದು ಪತ್ತೆಯಾಗಿತ್ತು. ಹೀಗಾಗಿ ಪೊಲೀಸರು ಕಿಂಗ್ಸ್ ಬರಿಗೆ ಕಾರಿನಿಂದ ಕೆಳಗಿಳಿಯುವಂತೆ ಹೇಳಿದ್ದರು. ಆದ್ರೆ ಆತ ಆಶ್ಚರ್ಯಕರ ರೀತಿಯಲ್ಲಿ ಕಾರನ್ನ ಬೀಚ್ ಕಡೆಗೆ ತಿರುಗಿಸಿ, ನಂತರ ಸಮುದ್ರಕ್ಕೆ ಹಾರಿ ಈಜಲು ಶುರು ಮಾಡಿದ್ದ.

ಸರ್ಫ್ ಸಿಟಿ ಪೊಲೀಸರು ಕಿಂಗ್ಸ್ ಬರಿನನ್ನು ಪತ್ತೆಹಚ್ಚಿ ಬಂಧಿಸಲು ಸುಮಾರು ಮೂರು ಗಂಟೆಯೇ ಬೇಕಾಯ್ತು. ಪೊಲೀಸರು ಆತನ ಪತ್ತೆಗೆ ಡ್ರೋನ್ ಕೂಡ ಹಾರಿಬಿಡಬೇಕಾಯ್ತು ಎಂದು ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

ಶಾರ್ಕ್‍ವೊಂದು ಕಿಂಗ್ಸ್ ಬರಿ ಸಮೀಪದಲ್ಲೇ ಈಜುತ್ತಿದ್ದುದು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವೇಳೆ ಕಿಂಗ್ಸ್ ಬರಿಗಾಗಿ ನಡೆಯುತ್ತಿದ್ದ ಶೋಧ ಕಾರ್ಯ ರಕ್ಷಣಾ ಕಾರ್ಯವಾಗಿ ಮಾರ್ಪಾಡಾಗಿತ್ತು.

ಡ್ರೋನ್ ಆಪರೇಟ್ ಮಾಡುತ್ತಿದ್ದ ಪೊಲೀಸರಿಗೆ ಶಾರ್ಕ್ ಕಾಣಿಸುವ ವೇಳೆಗೆ ಕಿಂಗ್ಸ್ ಬರಿ ಸುಮಾರು 1 ಗಂಟೆಯಷ್ಟು ಕಾಲ ಈಜಾಡಿ ಸಮುದ್ರ ತೀರದಿಂದ 4 ಸಾವಿರ ಅಡಿಗಳಷ್ಟು ದೂರಕ್ಕೆ ಹೋಗಿದ್ದ.

ಕೊನೆಗೆ ಪೊಲೀಸರಿಂದ ದೂರ ಹೋಗಬಯಸಿದ್ದ ಕಿಂಗ್ಸ್ ಬರಿನನ್ನು ಪೊಲೀಸರೇ ಕಾಪಾಡಿ ಬಂಧಿಸಿದ್ದಾರೆ. ಕಿಂಗ್ಸ್‍ಬರಿ ವಿರುದ್ಧ ಹಲವಾರು ಡ್ರಗ್ಸ್ ಸಂಬಂಧಿತ ಆರೋಪಗಳಿವೆ ಎಂದು ವರದಿಯಾಗಿದೆ.

 

Click to comment

Leave a Reply

Your email address will not be published. Required fields are marked *

www.publictv.in