Bengaluru City
ಈ ಕನ್ನಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಜೂಹಿ ಚಾವ್ಲಾ

ಬೆಂಗಳೂರು: ಬಾಲಿವುಡ್ ಬೆಡಗಿ ಜೂಹಿ ಚಾವ್ಲಾ ಈ ಹಿಂದೆ ಪ್ರೇಮಲೋಕ, ಕಿಂದರಿ ಜೋಗಿ ಮುಂತಾದ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಮತ್ತೊಮ್ಮೆ ಕನ್ನಡ ಚಿತ್ರವೊಂದರಲ್ಲಿ ಜೂಹಿ ಅಭಿನಯಿಸಲಿದ್ದಾರೆ.
ಜೂಹಿ ಚಾವ್ಲಾ ಕೊನೆಯ ಬಾರಿ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ರಮೇಶ್ ಅರವಿಂದ್ ಅವರ 100ನೇ ಸಿನಿಮಾ ಪುಷ್ಪಕ ವಿಮಾನ ದಲ್ಲಿ. ಇದೀಗ ವೆರಿ ಗುಡ್ 10/10 ಚಿತ್ರದಲ್ಲಿ ಜೂಹಿ ಚಾವ್ಲಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಈ ಚಿತ್ರದಲ್ಲಿ ಜೂಹಿ ಸಂಗೀತ ಶಿಕ್ಷಕಿಯ ಪಾತ್ರ ಮಾಡ್ತಿದ್ದಾರೆ. ಚಿತ್ರವನ್ನ ಯಶವಂತ್ ಸರ್ದೇಶ್ಪಾಂಡೆ ನಿರ್ದೇಶನ ಮಾಡ್ತಿದ್ದಾರೆ.
ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಜೂಹಿ, ತಮ್ಮ ಸಂಗೀತ ಪರಿಣತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಲಂಡನ್ನ ಭಾರತೀಯ ವಿದ್ಯಾ ಭವನದಲ್ಲಿ ಪಂಡಿತ್ ವಿಶ್ವ ಪ್ರಕಾಶ್ ಅವರ ಬಳಿ ಜೂಹಿ ಸಂಗೀತಾಭ್ಯಾಸ ಮಾಡಿದ್ದಾರೆ. ಭಾರತಕ್ಕೆ ಮರಳಿದ ನಂತರ ನಟಿ ಪದ್ಮಿನಿ ಕೊಲ್ಹಾಪುರಿ ಅವರ ತಂದೆಯ ಮಾರ್ಗದರ್ಶನದಲ್ಲಿ ಸಂಗೀತಾಭ್ಯಾಸ ಮಾಡಿದ್ದಾರೆ.
10/10 ಚಿತ್ರದಲ್ಲಿ ಅತಿಥಿ ಪಾತ್ರದ ಜೊತೆಗೆ ಎರಡು ಹಾಡುಗಳಲ್ಲೂ ಜೂಹಿ ಕಾಣಿಸಿಕೊಳ್ಳಲಿದ್ದಾರೆ. ಇದು ಮಕ್ಕಳ ಚಿತ್ರವಾದ್ದರಿಂದ ನಿರ್ದೇಶಕ ಯಶವಂತ್ ಏಪ್ರಿಲ್ 10 ರಿಂದ ಮೇ 20ರವರೆಗೆ ಆಡಿಷನ್ಸ್ ಮಾಡಿ ಚಿತ್ರಕ್ಕಾಗಿ ಅನೇಕ ಮಕ್ಕಳನ್ನ ಆಯ್ಕೆ ಮಾಡಿದ್ದಾರೆ.
ಇನ್ನು ಚಿತ್ರಕ್ಕೆ ವಿ ಮನೋಹರ್ ಸಂಗೀತವಿದ್ದು, ರಮಾನಾತ್ ಕೊಟಿಯಾನ್ ಹಣ ಹೂಡಿದ್ದಾರೆ. ಚಿತ್ರವನ್ನ ಇಂಗ್ಲಿಷ್ ಹಾಗೂ ಹಿಂದಿಯಲ್ಲೂ ಡಬ್ ಮಾಡೋ ಬಗ್ಗೆ ಚಿಂತನೆ ನಡೆಸ್ತಿದ್ದಾರೆ.
ಮಕ್ಕಳ ಚಿತ್ರವಾದ್ದರಿಂದ ಈ ಚಿತ್ರವನ್ನ ಒಪ್ಪಿಕೊಂಡೆ ಅಂತಾರೆ ಪ್ರೇಮಲೋಕದ ಬೆಡಗಿ ಜೂಹಿ.
