ಕೋಲಾರ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪಿಗೆ ಜೀವಾವಧಿ ಶಿಕ್ಷೆ, ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪಿಗೆ 10 ವರ್ಷ ಜೈಲು, 1 ಲಕ್ಷ ರೂ. ದಂಡ ಹೀಗೆ ಒಂದಲ್ಲ ಎರಡಲ್ಲ ಕೇವಲ ಎರಡು ವರ್ಷಗಳಲ್ಲಿ ಬರೋಬ್ಬರಿ 100 ಪ್ರಕರಣಗಳಲ್ಲಿ ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆ ವಿಧಿಸಿರುವ ಹೆಗ್ಗಳಿಕೆ ಕೋಲಾರ 2ನೇ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಸಲ್ಲುತ್ತದೆ.
ರಾಜ್ಯದಲ್ಲಿ ಹಾಗೂ ದೇಶದಲ್ಲೇ ಅತಿ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಿರುವ ಕೋಲಾರ 2ನೇ ಜಿಲ್ಲಾ ಸತ್ರನ್ಯಾಯಾಲಯದ ನ್ಯಾಯಾಧೀಶೆ ಬಿ.ಎಸ್.ರೇಖಾ ಅವರು ಕಳೆದ ಎರಡು ವರ್ಷಗಳಲ್ಲಿ 100 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದಾರೆ.
2017 ರಿಂದ 2019ರವರೆಗೆ ನೂರು ಪ್ರಕರಣಗಳಲ್ಲಿ 74 ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕಣಗಳಾದರೆ, 26 ಜಾತಿನಿಂದನೆ ಹಾಗೂ ಕೊಲೆ ಪ್ರಕರಣಗಳಾಗಿವೆ. ಈ 100 ಪ್ರಕರಣಗಳಲ್ಲಿ ನ್ಯಾಯಾಧೀಶೆ ಬಿ.ಎಸ್ ರೇಖಾರವರು ನೀಡಿರುವ ಶಿಕ್ಷೆ ಪ್ರಮಾಣಗಳನ್ನು ನೋಡೋದಾದರೆ, 3 ಪ್ರಕರಣಗಳಲ್ಲಿ ಮರಣ ದಂಡನೆ ಶಿಕ್ಷೆ, 11 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ, 26 ಪ್ರಕರಣಗಳಲ್ಲಿ 10 ವರ್ಷ ಜೈಲು ಶಿಕ್ಷೆ ಮತ್ತು 39 ಪ್ರಕರಣಗಳಲ್ಲಿ 7 ವರ್ಷ ಜೈಲು ಶಿಕ್ಷೆ, 21 ಪ್ರಕರಣಗಳಲ್ಲಿ 5 ವರ್ಷಕ್ಕಿಂತ ಕಡಿಮೆ ಶಿಕ್ಷೆ ನೀಡಲಾಗಿದೆ ಎಂದು ಸರ್ಕಾರಿ ವಕೀಲ ಮುನಿಸ್ವಾಮಿ ಗೌಡ ಹೇಳಿದ್ದಾರೆ.
ಇದರ ಜೊತೆಗೆ ವಿಶೇಷವಾಗಿ ಆಗಸ್ಟ್ 1 2018 ರಂದು ಮಾಲೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ವಿಶೇಷ ಕಾಳಜಿ ವಹಿಸಿದ ನ್ಯಾಯಾಲಯ ಕೇವಲ 45 ದಿನಗಳಲ್ಲಿ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಇತಿಹಾಸ ಕೂಡ ಇದೆ. ಈ ನ್ಯಾಯಾಲಯದಲ್ಲಿ ಅತ್ಯಾಚಾರಿಗಳಿಗೆ ನಿರ್ದಾಕ್ಷಿಣ್ಯವಾಗಿ ಶಿಕ್ಷೆ ವಿಧಿಸಿದ ನ್ಯಾಯಾಧೀಶರಾದ ರೇಖಾ ಅವರು ತಮ್ಮ 100ನೇ ಪ್ರಕರಣದಲ್ಲಿ ಮಂಗಳವಾರ ಶಿಕ್ಷೆ ವಿಧಿಸಿದ್ದು, ಅಪ್ರಾಪ್ತ ಬಾಲಕಿಯ ಅತ್ಯಾಚಾರಕ್ಕೆ ಸಹಕರಿಸಿದ ಒಂದಿಡೀ ಕುಟುಂಬಕ್ಕೆ ಜೈಲು ಶಿಕ್ಷೆ ವಿಧಿಸಿದ್ದಾರೆ.
ಕೋಲಾರದ ಎರಡನೇ ಜಿಲ್ಲಾಸತ್ರ ನ್ಯಾಯಾಲಯದ ತೀರ್ಪು, ಜಿಲ್ಲೆಯಲ್ಲಿ ಕಾಮುಕರಿಗೆ ಸಿಂಹಸ್ವಪ್ನವಾಗಿದ್ದು ಇಂತಹ ತೀರ್ಪುಗಳಿಂದ ಜಾಗೃತರಾಗಿರುವ ಕಾಮುಕರು ಅಪರಾಧ ಕೃತ್ಯ ಎಸಗಲು ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಅತ್ಯಾಚಾರ, ಕೊಲೆ ಹಾಗೂ ಜಾತಿನಿಂದನೆ ಪ್ರಕರಣಗಳು ಕ್ರಮೇಣ ಕಡಿಮೆಯಾಗಿದೆ. ನ್ಯಾಯ ದೇವತೆಗೆ ಹಾಗೂ ನ್ಯಾಯಾಧೀಶರ ತೀರ್ಪಿಗೆ ಜಿಲ್ಲಾಡಳಿತ ಕೂಡ ಶ್ಲಾಘನೆ ವ್ಯಕ್ತಪಡಿಸಿದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದ್ದಾರೆ.