ವಿಶ್ವಕಪ್‌ ಟ್ರೋಫಿ ಹಿಡಿದು ಘರ್ಜಿಸಿದ ʻರೋ-ಕೊʼ – ವಾಂಖೆಡೆ ಮೈದಾನ ತಲುಪಿದ ವಿಜಯಯಾತ್ರೆ!

Public TV
3 Min Read
Team India Mumbai 3

ಮುಂಬೈ: 17 ವರ್ಷಗಳ ಬಳಿಕ ಟಿ20 ವಿಶ್ವಕಪ್‌ (T20 World Cup) ಗೆದ್ದು ತಂದ ಟೀಂ ಇಂಡಿಯಾ ಕ್ರಿಕೆಟ್‌ ಆಟಗಾರರನ್ನು ಗೌರವಿಸುವ ಸಲುವಾಗಿ ಮುಂಬೈನಲ್ಲಿಂದು ಅದ್ಧೂರಿ ವಿಜಯಯಾತ್ರೆ ನಡೆಯಿತು. ಮುಂಬೈ (Mumbai) ಕಡಲತೀರ ನಾರೀಮನ್ ಪಾಯಿಂಟ್‌ನಿಂದ ಆರಂಭಗೊಂಡ ಅದ್ಧೂರಿ ಯಾತ್ರೆ ಸುಮಾರು 2 ಕಿಮೀ ತಲುಪಿತು. ವಿಜಯಯಾತ್ರೆಯಲ್ಲಿ ನಾಯಕ ರೋಹಿತ್‌ ಶರ್ಮಾ, ಸ್ಟಾರ್‌ ಕ್ರಿಕೆಟಿಗ ವಿರಾಟ್‌ ಕೊಹ್ಲಿ (Virat Kohli) ಇಬ್ಬರು ನೆರೆದಿದ್ದ ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಮಾಡಿದರು.

ವಿಜಯೋತ್ಸವ ಪರೇಡ್‌ ವೇಳೆ ಆಟಗಾರರ ಮಧ್ಯೆ ನಿಂತು ಸಂಭ್ರಮದ ಕಡಲಲ್ಲಿ ತೇಲುತ್ತಿದ್ದ ರೋಹಿತ್‌ ಶರ್ಮಾರ (Rohit Sharma) ಹೆಗಲ ಮೇಲೆ ಕೈಹಾಕಿಕೊಂಡು ಕೊಹ್ಲಿ ಬಸ್‌ ಮುಂಭಾಗಕ್ಕೆ ಕರೆತಂದರು. ಬಳಿಕ ಇಬ್ಬರೂ ಟ್ರೋಫಿಯನ್ನು ಎತ್ತಿ ಹಿಡಿದು ಜೋರಾಗಿ ಕೇಕೆ ಹಾಕಿದರು. ಈ ದೃಶ್ಯದ ವೀಡಿಯೋ ತುಣುಕು ಕೆಲವೇ ಕ್ಷಣಗಳಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಅಂದು ಅವಮಾನವಾಗಿದ್ದ ಜಾಗದಲ್ಲೇ ಸನ್ಮಾನ – ನೆನಪಿದೆಯಾ 2007ರ ರೋಮಾಂಚನಕಾರಿ ಕ್ಷಣ!

ನಾಯಕನ ನಂಬಿಕೆ ಎತ್ತಿ ಹಿಡಿದ ಕಿಂಗ್‌ ಕೊಹ್ಲಿ:
ವಿಶ್ವಕಪ್‌ ಟೂರ್ನಿಯ ಆರಂಭದಿಂದಲೂ ʻರೋ-ಕೊʼ ಆರಂಭಿಕ ಜೋಡಿ ಭರ್ಜರಿ ಕಮಾಲ್‌ ಮಾಡಿತ್ತು. ಆದ್ರೆ ಆರಂಭಿಕ ಪಂದ್ಯದಿಂದಲೂ ಫಾರ್ಮ್‌ ಕಳೆದುಕೊಂಡಿದ್ದ ಕಿಂಗ್‌ ಕೊಹ್ಲಿ ಬಗ್ಗೆ ಅನೇಕರಿಂದ ಟೀಕೆಗಳು ವ್ಯಕ್ತವಾಗುತ್ತಿತ್ತು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಾಯಕ ರೋಹಿತ್‌, ವಿರಾಟ್‌ ಪರವಾಗಿಯೇ ಮಾತನಾಡುತ್ತಾ ಬಂದಿದ್ದರು. ಬಹುಶಃ ವಿರಾಟ್‌ ತಮ್ಮ ಆಟವನ್ನು ಫೈನಲ್‌ಗೆ ಉಳಿಸಿಕೊಂಡಿದ್ದಾರೆ ಎಂದು ವಿಶ್ವಾಸದ ನುಡಿಗಳನ್ನಾಡಿದ್ದರು. ಅದರಂತೆ ರೋಹಿತ್‌ ಶರ್ಮಾ ಅವರ ನಂಬಿಕೆಯನ್ನು ಕೊಹ್ಲಿ ಸುಳ್ಳಾಗಿಸಲಿಲ್ಲ. ಸ್ಫೋಟಕ ಪ್ರದರ್ಶನದೊಂದಿಗೆ ತಾಳ್ಮೆಯ ಆಟವಾಡಿದ ಕೊಹ್ಲಿ 59 ಎಸೆತಗಳಲ್ಲಿ 76 ರನ್‌ ಗಳಿಸಿದ್ದರು. ಇದು ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ 170 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಅಲ್ಲದೇ ವಿಶ್ವಕಪ್‌ ಇತಿಹಾಸದಲ್ಲೇ ತಂಡದವೊಂದರ ಗರಿಷ್ಠ ರನ್‌ ಮೊತ್ತವೂ (176) ಆಯಿತು.

Team India Mumbai 1 1

ವಿಜಯಯಾತ್ರೆ ಮುಕ್ತಾಯ:
ಟಿ-20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಜಕ ಜಯ ಸಾಧಿಸಿ, 17 ವರ್ಷಗಳ ಬಳಿಕ ಚಾಂಪಿಯನ್ ಆದ ಟೀಂ ಇಂಡಿಯಾಗೆ ಸ್ವದೇಶದಲ್ಲಿ ಅದ್ಧೂರಿ, ವೈಭವೋಪೇತ ಸ್ವಾಗತ ಸಿಕ್ಕಿದೆ. ಮುಂಬೈನ ಕಡಲ ಕಿನಾರೆಯಲ್ಲಿ 2 ಕಿಮೀ ರೋಡ್ ಶೋನಲ್ಲಿ ಅಬ್ಬಬ್ಬಾ… ಎನಿಸುವಷ್ಟು ಜನಸಾಗರ ಜಮಾಯಿಸಿ ಬರಮಾಡಿಕೊಂಡಿದೆ. ಸದ್ಯ ರೋಡ್‌ ಶೋ ಮುಕ್ತಾಯಗೊಂಡು ಮುಂಬೈನ ವಾಂಖೆಡೆ ಕ್ರೀಡಾಂಗಣ ತಲುಪಿದೆ. ಕೆಲವೇ ಕ್ಷಣದಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಟಗಾರರು ಹಾಗೂ ಬಿಸಿಸಿಐ ಸಿಬ್ಬಂದಿ ಬಳಗವನ್ನು ಸನ್ಮಾನಿಸಲಾಗುತ್ತದೆ. ಇದಾದ ಬಳಿಕ ಬಿಸಿಸಿಐ ಘೋಷಿಸಿರುವ 125 ಕೋಟಿ ರೂ. ಬಹುಮಾನ ಮೊತ್ತವನ್ನು ಆಟಗಾರರಿಗೆ ಪ್ರದಾನ ಮಾಡಲಾಗುತ್ತದೆ. ಇದನ್ನೂ ಓದಿ: ವಿಜಯಯಾತ್ರೆ ಶುರು – ʻವಿಶ್ವʼಗೆದ್ದ ವೀರರನ್ನು ಕಣ್ತುಂಬಿಕೊಂಡ ಅಭಿಮಾನಿಗಳು!

Team India 7

ವಿಜಯೋತ್ಸವಕ್ಕೆ ಆಹ್ವಾನಿಸಿದ್ದ ರೋಹಿತ್‌:
ಮುಂಬೈನವರೇ ಆಗಿರುವ ನಾಯಕ ರೋಹಿತ್ ಶರ್ಮಾ ತಮ್ಮ ತವರಿನ ಅಭಿಮಾನಿಗಳಿಗೆ ಈ ಬೃಹತ್ ಮೆರವಣಿಯಲ್ಲಿ ಪಾಲ್ಗೊಳ್ಳುವಂತೆ ವಿಶೇಷವಾಗಿ ಮನವಿ ಮಾಡಿದ್ದರು. ಭಾರತಕ್ಕೆ ಬರುವ ಮುನ್ನವೇ ರೋಹಿತ್​ ‘ಇಂತಹ ವಿಶೇಷ ಸಂಭ್ರಮವನ್ನು ನಿಮ್ಮೊಂದಿಗೆ ಆಚರಿಸುವ ಬಯಕೆಯಿದೆ. ಮರೈನ್ ಡ್ರೈವ್ ಹಾಗೂ ವಾಂಖೇಡೆ ಕ್ರೀಡಾಂಗಣದಲ್ಲಿ ನಮ್ಮೊಂದಿಗೆ ನೀವೂ ಜತೆಯಾಗಿ’ ಎಂದು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲದೇ ವಾಂಖೆಡೆ ಮೈದಾನಕ್ಕೆ ಉಚಿತ ಪ್ರವೇಶ ಕಲ್ಪಿಸಿದ್ದರಿಂದ ಮೈದಾನದ ತುಂಬಾ ಅಭಿಮಾನಿಗಳು ಕಿಕ್ಕಿರಿದಿದ್ದರು. ಇದನ್ನೂ ಓದಿ: ʻವಿಶ್ವʼ ವಿಜಯಯಾತ್ರೆಗೆ ಕ್ಷಣಗಣನೆ – ಕ್ರಿಕೆಟ್‌ ಅಭಿಮಾನಿಗಳಿಂದ ʻಮೋದಿ ಮೋದಿʼ ಘೋಷಣೆ!

ಮುಂಬೈಗೆ ತೆರಳುವ ಮುನ್ನ ಟೀಮ್​ ಇಂಡಿಯಾ ಆಟಗಾರರು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi)ಅವರ ನಿವಾಸಕ್ಕೆ (Team India Arrival) ಭೇಟಿ ನೀಡಿ ವಿಶ್ವಕಪ್​ ಗೆಲುವಿನ ಕುರಿತು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು. ಮೋದಿ ಕೂಡ ಆಟಗಾರರೊಂದಿಗೆ ಕೆಲ ಕಾಲ ಕುಶಲೋಪರಿ ನಡೆಸಿದರು. ಜೊತೆಗೆ ಗ್ರೂಫ್​ ಫೋಟೊ ತೆಗೆಸಿಕೊಂಡರು. ಆಟಗಾರರಿಗೆ ವಿಶೇಷ ಭೋಜನ ಕೂಟ ಸಹ ಏರ್ಪಡಿಸಲಾಗಿತ್ತು. ಈ ವೇಳೆ ಬಿಸಿಸಿಐ ಕಡೆಯಿಂದ ಮೋದಿಗೆ (PM Modi) ನಮೋ ನಂ.1 ಎಂದು ಬರೆದ ಟೀಂ​ ಇಂಡಿಯಾ ಜೆರ್ಸಿಯನ್ನು (Indian Cricket Jersey) ಉಡುಗೊರೆಯಾಗಿ ನೀಡಲಾಯಿತು.

Share This Article