ಜೆಪಿ ನಡ್ಡಾಗೆ ಬಿಜೆಪಿಯ ಅಧ್ಯಕ್ಷ ಪಟ್ಟ – ಈ ಹುದ್ದೆ ಸಿಗಲು ಪ್ರಮುಖ ಕಾರಣ ಏನು?

Public TV
2 Min Read
jp nadda

ನವದೆಹಲಿ: ಕಾರ್ಯಾಧ್ಯಕ್ಷರಾಗಿದ್ದ ಜಗತ್ ಪ್ರಕಾಶ್ ನಡ್ಡಾ(ಜೆಪಿ ನಡ್ಡಾ) ಅವಿರೋಧವಾಗಿ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

ದೆಹಲಿಯಲ್ಲಿ ನಡೆದ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ನಡ್ಡಾ ಅವರು ಪಕ್ಷದ ಅಧಿಕಾರ ಸ್ವೀಕರಿಸಿದರು. ದೆಹಲಿ ಚುನಾವಣೆಗೂ ಕೆಲವೇ ದಿನಗಳ ಮುನ್ನ ಜೆಪಿ ನಡ್ಡಾ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಉಸ್ತುವಾರಿ ಹೊತ್ತು ಬಿಜೆಪಿಯನ್ನು ಗೆಲ್ಲಿಸಿದ ಬಳಿಕ ಅಮಿತ್ ಶಾ ಜುಲೈ 9 ರಿಂದ ಇಲ್ಲಿಯವರೆಗೆ ಐದುವರೆ ವರ್ಷಗಳ ಕಾಲ ಬಿಜೆಪಿ ಅಧ್ಯಕ್ಷರಾಗಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಗುಜರಾತಿನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಗೆದ್ದ ಬಳಿಕ ಅಮಿತ್ ಶಾ ಗೃಹ ಖಾತೆಯನ್ನು ವಹಿಸಿಕೊಂಡರು. ಬಿಜೆಪಿಯಲ್ಲಿ ಮಂತ್ರಿ ಸ್ಥಾನ ಮತ್ತು ಅಧ್ಯಕ್ಷ ಸ್ಥಾನ ಎರಡು ಹುದ್ದೆಯನ್ನು ಒಬ್ಬರೇ ಹೊಂದುವಂತಿಲ್ಲ ಎನ್ನುವ ನಿಯಮ ಇರುವ ಹಿನ್ನೆಲೆಯಲ್ಲಿ ಕಳೆದ ವರ್ಷವೇ ಜೆಪಿ ನಡ್ಡಾ ಹೆಸರು ಅಧ್ಯಕ್ಷ ಸ್ಥಾನದ ಮುನ್ನೆಲೆಗೆ ಬಂದಿತ್ತು. ಈಗ ಅಧಿಕೃತವಾಗಿ ನಡ್ಡಾ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕಳೆದ ವರ್ಷದ ಜುಲೈನಲ್ಲಿ ನಡ್ಡಾ ಅವರು ಪಕ್ಷದ ಕಾರ್ಯಾಧ್ಯಕ್ಷರಾಗಿ ಆಯ್ಕೆ ಆಗಿದ್ದರು.

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ನಂಬುಗೆಯ ವ್ಯಕ್ತಿ ಆಗಿರುವ ಜೆಪಿ ನಡ್ಡಾ ಎಬಿವಿಪಿ, ಆರ್‌ಎಸ್‌ಎಸ್‌ ಮೂಲಕ ಮೇಲೆ ಬಂದಿದ್ದಾರೆ. ನಿತಿನ್ ಗಡ್ಕರಿ ಅವರ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಬಂದ ನಡ್ಡಾ ಅವರು 2010ರಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದರು.

1960ರ ಡಿಸೆಂಬರ್ 2 ರಂದು ಜನಿಸಿದ ನಡ್ಡಾ ಪಾಟ್ನಾ ವಿಶ್ವವಿದ್ಯಾಲಯದಿಂದಲೇ ಬಿ.ಎ ಪದವಿ ಪಡೆದಿದ್ದು ಹಿಮಾಚಲಪ್ರದೇಶದ ಶಿಮ್ಲಾ ವಿವಿಯಿಂದ ಕಾನೂನು ಶಾಸ್ತ್ರದಲ್ಲಿ ಪದವಿ ಓದಿದ್ದಾರೆ. ಉತ್ತಮ ಈಜುಪಟು ಆಗಿರುವ ನಡ್ಡಾ ಅವರು ರಾಷ್ಟ್ರೀಯ ಕಿರಿಯರ ಈಜು ಸ್ಪರ್ಧೆಯಲ್ಲಿ ಬಿಹಾರ ತಂಡವನ್ನು ಪ್ರತಿನಿಧಿಸಿದ್ದರು. 1991ರ ಡಿ. 11 ರಂದು ಮಲ್ಲಿಕಾ ಅವರನ್ನು ವರಿಸಿರುವ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ನಡ್ಡಾ ಅವರ ತಂದೆ ನಾರಾಯಣ್ ಲಾಲ್ ನಡ್ಡಾ ಪಟ್ನಾ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಉಸ್ತುವಾರಿಯನ್ನು ಜೆಪಿ ನಡ್ಡಾ ಅವರಿಗೆ ಅಮಿತ್ ಶಾ ನೀಡಿದ್ದರು. 2014ರ ಯಾವುದೇ ಮೈತ್ರಿ ಇಲ್ಲದೇ 71 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದ್ದರೆ 2019ರಲ್ಲಿ ಮಹಾಮೈತ್ರಿ ಏರ್ಪಟ್ಟಿದ್ದರಿಂದ ಬಿಜೆಪಿ ಇಷ್ಟು ಸ್ಥಾನ ಗೆಲ್ಲುವುದು ಕಷ್ಟ ಎಂಬ ವಿಶ್ಲೇಷಣೆ ಕೇಳಿ ಬಂದಿತ್ತು. ಆದರೆ ಅಂತಿಮ ಫಲಿತಾಂಶ ಬಂದಾಗ ಬಿಜೆಪಿ 62 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಈ ಗೆಲುವಿನ ಹಿಂದೆ ನಡ್ಡಾ ಅವರ ರಾಜಕೀಯ ತಂತ್ರಗಾರಿಕೆ ಕೆಲಸ ಮಾಡಿತ್ತು. ಸಂಘಟನಾ ಚಾತುರ್ಯ, ಮಾತುಗಾರಿಕೆ, ರಾಜಕೀಯ ಅನುಭವ, ದೆಹಲಿಯ ಹಿರಿಯ ನಾಯಕರ ಜೊತೆಗಿನ ಉತ್ತಮ ಸಂಬಂಧ ಇವುಗಳಿಂದಾಗಿ ಬಿಜೆಪಿಯ 11ನೇ ರಾಷ್ಟ್ರೀಯ ಅಧ್ಯಕ್ಷರಾಗಿ ನಡ್ಡಾ ಆಯ್ಕೆ ಆಗಿದ್ದಾರೆ.

2012ದಿಂದಲೂ ರಾಜ್ಯಸಭೆ ಸದಸ್ಯರಾಗಿರುವ ಅವರು ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಕುಟುಂಬ ಕಲ್ಯಾಣ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *