ಮಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಕರ್ತರ 35ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಇದೇ ಮೊದಲ ಬಾರಿ ಮಂಗಳೂರಿನಲ್ಲಿ ಮಾ 7 ಮತ್ತು 8ರಂದು ನಡೆಯಲಿದೆ. ಸಮ್ಮೇಳನದ ಸಿದ್ಧತೆ ಪೂರ್ಣಗೊಂಡಿದೆ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಮ್ಮೇಳನದ ವಿವರ ನೀಡಿದರು. ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದ ದಿ. ವಡ್ಡರ್ಸೆ ರಘುರಾಮ ಶೆಟ್ಟಿ ವೇದಿಕೆಯಲ್ಲಿ ನಡೆಯುವ ಎರಡು ದಿನಗಳ ಸಮ್ಮೇಳನವನ್ನು ಧರ್ಮಸ್ಥಳದ ದರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸುವರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆವಹಿಸುವರು. ತರಂಗ ವಾರಪತ್ರಿಕೆಯ ಸಂಪಾದಕಿ ಸಂಧ್ಯಾ ಪೈ ಸಮ್ಮೇಳನದ ಆಶಯ ಭಾಷಣ ಮಾಡಲಿದ್ದಾರೆ. ಉಪಮುಖ್ಯಮಂತ್ರಿ ಸಿ.ಎನ್ ಅಶ್ವತ್ಥ್ ನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ.
ವಿಚಾರಗೋಷ್ಠಿಗಳು:
ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಎ ವಿವೇಕ ಉಡುಪ ಅವರು “ಪತ್ರಕರ್ತರ ಮಾನಸಿಕ ಒತ್ತಡ ಮತ್ತು ಆರೋಗ್ಯ ನಿರ್ವಹಣೆ” ಬಗ್ಗೆ ಮಾತನಾಡಲಿರುವರು. ಹಿರಿಯ ಪತ್ರಕರ್ತ ಈಶ್ವರ ದೈತೋಟ ಅಧ್ಯಕ್ಷತೆಯಲ್ಲಿ “ಪತ್ರಕರ್ತರ ವೃತ್ತಿ ಸವಾಲು ಮತ್ತು ಸಾಮಾಜಿಕ ಹೊಣೆಗಾರಿಕೆಯ” ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಸಂಜೆ ಪ್ರಜಾವಾಣಿಯ ಸಂಪಾದಕ ರವೀಂದ್ರ ಭಟ್ ಅಧ್ಯಕ್ಷತೆಯಲ್ಲಿ “ಸಾಂಸ್ಕೃತಿಕ ಮಾಧ್ಯಮ” ಎಂಬ ಗೋಷ್ಠಿ ನಡೆಯಲಿದೆ.
ರವಿವಾರ “ಕರಾವಳಿ ಭಾಗದ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ” ಎನ್ನುವ ಬಗ್ಗೆ ವಿಚಾರಗೋಷ್ಠಿ ವಿಶ್ರಾಂತ ಕುಲಪತಿ ಡಾ.ಬಿ.ಎ ವಿವೇಕ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಆಯಿಷಾ ಖಾನಂ ಅಧ್ಯಕ್ಷತೆಯಲ್ಲಿ “ಭಾರತೀಯ ಪತ್ರಿಕೋದ್ಯಮ” ವಿಚಾರದಲ್ಲಿ ಎರಡನೇ ಗೋಷ್ಠಿ ನಡೆಯಲಿದ್ದು, ದಿಲ್ಲಿ, ಜಾರ್ಖಂಡ್, ಶ್ರೀಲಂಕಾದ ಪತ್ರಕರ್ತರು ಪಾಲ್ಗೊಳ್ಳಲಿದ್ದಾರೆ. ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರು ಹಿರಿಯ ಪತ್ರಕರ್ತೆ ನಿರ್ಮಲಾ ಎಲಿಗಾರ್ ಅಧ್ಯಕ್ಷತೆಯಲ್ಲಿ “ಮಾಧ್ಯಮ ಮತ್ತು ಮಹಿಳೆ”ಎಂಬ ವಿಚಾರದ ಬಗ್ಗೆ ಗ್ರಾಮೀಣ ಪತ್ರಿಕೋದ್ಯಮದ ಸವಾಲು ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿನಿಧಿಗಳ ಸಮಾವೇಶ ನಡೆಯಲಿದೆ.
ಸನ್ಮಾನ ಸಮಾರಂಭ:
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಗೌರವ ಸಮರ್ಪಣೆ ಮೈಸೂರು ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ ಮಹೇಂದ್ರ ಮತ್ತು ಪದಾಧಿಕಾರಿಗಳಿಗೆ, ರಾಜ್ಯ ಪ್ರಶಸ್ತಿ ಪುರಸ್ಕೃತ ಸುದ್ದಿ ಬಿಡುಗಡೆ ಪತ್ರಿಕೆ ಸಂಪಾದಕ ಡಾ. ಯು.ಪಿ ಶಿವಾನಂದ್, ಹಿರಿಯ ಪತ್ರರ್ತರಾದ ಕೆ. ಆನಂದ್ ಶೆಟ್ಟಿ, ಮನೋಹರ್ ಪ್ರಸಾದ್ ಅವರನ್ನು ಸನ್ಮಾನಿಸಲಾಗುವುದು. ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ ಕುಮಾರಸ್ವಾಮಿ, ಎಂ ವೀರಪ್ಪ ಮೊಯ್ಲಿ ಭಾಗವಹಿಸಲಿದ್ದಾರೆ.
ಸಂಘದ ವತಿಯಿಂದ ಪತ್ರಕರ್ತರಿಗೆ ಜೀವಮಾನದ ಸೇವೆ, ಸಾಧನೆಗಾಗಿ ಮತ್ತು ವರದಿ ಲೇಖನಗಳಿಗಾಗಿ ನೀಡಲಾಗುವ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಸಂಜೆ ಸಮಾರೋಪ ಸಮಾರಂಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಮಾಧುಸ್ವಾಮಿ, ಸುರೇಶ್ ಕುಮಾರ್, ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರುಗಳು ಭಾಗಿಯಾಗಲಿದ್ದಾರೆ ಎಂದು ವಿವರಿಸಿದರು.
ಸಮ್ಮೇಳನ ಸಾಂಸ್ಕೃತಿಕ ವೈವಿಧ್ಯ:
ಮಾ 7ರಂದು ಪತ್ರಕರ್ತರ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಭಿನವ ಮಂಗಳೂರು ಲೋಕೇಶ್ ಸಂಪಿಗೆ ಬಳಗದವರಿಂದ ವಾದ್ಯ ವೈವಿಧ್ಯ, ಮೆಮ್ ರಾಮ್ ದಾಸ್ ಬಳಗದವರಿಂದ ಕರ್ನಾಟಕ ಜಾನಪದ ಗಾನ ವೈಭವ, ಆಯನಾ ವಿ. ಪೆರ್ಲ ಅವರಿಂದ ನೃತ್ಯ ವೈಭವ, ಕರಾವಳಿ ಕಾಲೇಜು ಸಮೂಹದಿಂದ ಕರ್ನಾಟಕ ಸಾಂಸ್ಕೃತಿಕ ವೈಭವ. ಸಂಜೆ ವಿದುಷಿ ಶಾಲಿನಿ ಆತ್ಮಭೂಷಣ್ ನಿರ್ದೇಶನದಲ್ಲಿ ನೃತ್ಯೋಪಾಸನಾ ಕಲಾ ಕೇಂದ್ರ ಪುತ್ತೂರು ಇವರಿಂದ ಭರತನಾಟ್ಯ ಸಮೂಹ ನೃತ್ಯ, ಎಲ್ಲೂರು ರಾಮಚಂದ್ರ ಭಟ್ ನಿರ್ದೇಶನದಲ್ಲಿ ಪತ್ರಕರ್ತರ ತಂಡದಿಂದ ಭಾರ್ಗವ ವಿಜಯ ಯಕ್ಷಗಾನ, ವಿಭಾ ಶ್ರೀನಿವಾಸ ನಾಯಕ್ ಮತ್ತು ತಂಡದಿಂದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಎರಡನೇ ದಿನ ಬೆಳಗ್ಗೆ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ನೃತ್ಯರೂಪಕ ಮಧ್ಯಾಹ್ನ ಕುದ್ರೋಳಿ ಗಣೇಶ್ ಅವರಿಂದ ಜಾದೂ ಪ್ರದರ್ಶನ, ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ.
ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಾತನಾಡಿ ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ ಕುತ್ಲೂರು ಸರಕಾರಿ ಶಾಲೆಯಿಂದ ಮಕ್ಕಳು ಬೆಳಿಸಿದ ತರಕಾರಿಗಳನ್ನು ರಾಜ್ಯ ಸಮ್ಮೇಳನಕ್ಕೆ ನೀಡುವುದಾಗಿ ಶಾಲೆಯ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ ಎಂದು ಹೇಳಿದರು.