
ಟೆಲ್‌ಅವೀವ್: ಇಸ್ರೇಲ್ ಸೇನೆ (Israel) ಗಾಜಾ (Gaza) ಮೇಲೆ ನಡೆಸಿದ ದಾಳಿಯಲ್ಲಿ ಪತ್ರಕರ್ತ ಮತ್ತು ಹಿರಿಯ ರಕ್ಷಣಾ ಅಧಿಕಾರಿ ಸೇರಿದಂತೆ 20 ಜನ ಸಾವನ್ನಪ್ಪಿದ್ದಾರೆ.
ಇಸ್ರೇಲ್ ಕಾರ್ಯಾಚರಣೆಯಲ್ಲಿ ಇತ್ತೀಚಿನ ಸಾವುಗಳು ದಕ್ಷಿಣದಲ್ಲಿ ಖಾನ್ ಯೂನಿಸ್, ಉತ್ತರದಲ್ಲಿ ಜಬಾಲಿಯಾ ಮತ್ತು ಮಧ್ಯ ಗಾಜಾ ಪಟ್ಟಿಯ ನುಸೈರತ್‌ನಲ್ಲಿ ಪ್ರತ್ಯೇಕ ಇಸ್ರೇಲಿ ದಾಳಿಗಳಿಂದ ಉಂಟಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಶೂಟೌಟ್ – ಇಸ್ರೇಲ್ ರಾಯಭಾರ ಕಚೇರಿ ಅಧಿಕಾರಿಗಳ ಹತ್ಯೆ
ಜಬಾಲಿಯಾದಲ್ಲಿ ವೈಮಾನಿಕ ದಾಳಿಯಿಂದ ಸ್ಥಳೀಯ ಪತ್ರಕರ್ತ ಹಸನ್ ಮಜ್ದಿ ಅಬು ವಾರ್ದಾ ಹಾಗೂ ಅವರ ಕುಟುಂಬಸ್ಥರು ಸಾವಿಗೀಡಾಗಿದ್ದಾರೆ. ನುಸೈರತ್‌ನಲ್ಲಿ ನಡೆದ ಮತ್ತೊಂದು ವೈಮಾನಿಕ ದಾಳಿಯಲ್ಲಿ ಪ್ರದೇಶದ ನಾಗರಿಕ ತುರ್ತು ಸೇವೆಯ ಹಿರಿಯ ಅಧಿಕಾರಿ ಅಶ್ರಫ್ ಅಬು ನಾರ್ ಮತ್ತು ಅವರ ಪತ್ನಿ ಸಾವಪ್ಪಿದ್ದಾರೆ. ಒಟ್ಟು 20 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಬು ವಾರ್ದಾ ಅವರ ಸಾವಿನಿಂದ 2023ರ ಅಕ್ಟೋಬರ್ 7ರಿಂದ ಗಾಜಾದಲ್ಲಿ ಕೊಲ್ಲಲ್ಪಟ್ಟ ಪ್ಯಾಲೆಸ್ತೇನಿಯನ್ (Palestine) ಪತ್ರಕರ್ತರ ಸಂಖ್ಯೆ 220ಕ್ಕೆ ಏರಿಕೆಯಾಗಿದೆ ಎಂದು ಹಮಾಸ್ ನಡೆಸುತ್ತಿರುವ ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ.
ಶುಕ್ರವಾರ ಇಸ್ರೇಲ್ ಮಿಲಿಟರಿ ಗಾಜಾದಲ್ಲಿ ರಾತ್ರಿಯಿಡೀ ಹೆಚ್ಚಿನ ದಾಳಿಗಳನ್ನು ನಡೆಸಿದೆ. ಶಸ್ತ್ರಾಸ್ತ್ರ ಸಂಗ್ರಹಣಾಲಯ ಮತ್ತು ರಾಕೆಟ್ ಲಾಂಚರ್‌ಗಳು ಸೇರಿದಂತೆ 75 ಸ್ಥಳಗಳ ಮೇಲೆ ಈ ದಾಳಿ ನಡೆದಿದೆ. 2023 ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ದಾಳಿಯ ಬಳಿಕ, ಇಸ್ರೇಲ್ ಪ್ರತಿ ದಾಳಿ ಆರಂಭಿಸಿತ್ತು. ಇಲ್ಲಿವರೆಗಿನ ಸಂಘರ್ಷದಲ್ಲಿ 53,900 ಜನ ಪ್ಯಾಲೆಸ್ತೇನಿಯನ್ನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಜಪಾನ್ ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾದ ಭಾರತ