ಢಾಕಾ: ಅಪರಿಚಿತ ದುಷ್ಕರ್ಮಿಗಳು ಮಹಿಳಾ ಪತ್ರಕರ್ತೆಯ ಮನೆಗೆ ನುಗ್ಗಿ ಶಸ್ತ್ರಾಸ್ರಗಳಿಂದ ಇರಿದು ಅವರನ್ನು ಹತ್ಯೆ ಮಾಡಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.
ಸುಬರ್ನಾ ನೋಡಿ(32) ಮೃತ ಪತ್ರಕರ್ತೆ. ಇವರು ಖಾಸಗಿ ಸುದ್ದಿ ವಾಹಿನಿಯ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ಸುಬರ್ನಾ ಅವರು ಪಬ್ನಾ ಜಿಲ್ಲೆಯ ರಾಧಾನಗರ್ ಪ್ರದೇಶದಲ್ಲಿ ತನ್ನ 9 ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದರು. ಇವರು ಪತಿಯಿಂದ ವಿಚ್ಛೇದನ ಪಡೆಯಲು ಕಾಯುತ್ತಿದ್ದರು ಎಂದು ವರದಿಗಳು ತಿಳಿಸಿವೆ.
ದುಷ್ಕರ್ಮಿಗಳು ದ್ವಿಚಕ್ರವಾಹನದಲ್ಲಿ ಸುಮಾರು ಮಂಗಳವಾರ ರಾತ್ರಿ 10:45 ರ ವೇಳೆಗೆ ಸುಬರ್ನಾ ಮನೆಗೆ ಬಂದು ಬಾಗಿಲು ತಟ್ಟಿದ್ದಾರೆ. ನಂತರ ಸುಬರ್ನಾ ಬಾಗಿಲು ತೆರೆಯುತ್ತಿದ್ದಂತೆಯೇ ಆರೋಪಿಗಳು ಹರಿತವಾದ ಆಯುಧದಿಂದ ಇರಿದು ಪರಾರಿಯಾಗಿದ್ದಾರೆ ಎಂದು ಪದ್ನಾ ಹೆಚ್ಚುವರಿ ಅಧೀಕ್ಷಕ ಇಬ್ನೆ ಮಿಜಾನ್ ಹೇಳಿದ್ದಾರೆ.
ಆಕ್ರಮಣಕಾರರು ಅವರ ಮೇಲೆ ದಾಳಿ ಮಾಡಲು ತುಂಬಾ ಹರಿತವಾದ ಶಸ್ತ್ರಾಸ್ತ್ರವನ್ನು ಬಳಸಿದ್ದರು. ಘಟನೆ ನಡೆದ ಬಳಿಕ ಸುಬರ್ನಾ ಅವರ ಕಿರುಚಾಟ ಕೇಳಿ ಸ್ಥಳೀಯರು ಬಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಸುಬರ್ನಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಲು ಕೆಲವು ತಂಡಗಳನ್ನು ರೂಪಿಸಿದ್ದು, ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. ಸದ್ಯಕ್ಕೆ ಸುಬರ್ನಾ ಅವರನ್ನು ಕೊಲೆ ಮಾಡಿದ್ದ ಆರೋಪಿಗಳು ಪತ್ತೆಯಾಗಿಲ್ಲ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಎಸ್ಪಿ ಗೌತಮ್ ಕುಮಾರ್ ಬಿಸ್ವಾಸ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv