ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಕೈ ಬಿಟ್ಟ ನಂತರ, ಇದೇ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಮೇಘಾ ಶೆಟ್ಟಿ ಪ್ರತಿಕ್ರಿಯೆ ಏನು ಎನ್ನುವುದು ಎಲ್ಲರ ಕುತೂಹಲಕ್ಕೂ ಕಾರಣವಾಗಿದೆ. ಅನಿರುದ್ಧ ಈ ಧಾರಾವಾಹಿಯ ನಾಯಕನಾದರೆ, ಮೇಘಾ ಶೆಟ್ಟಿ ನಾಯಕಿ. ಅಲ್ಲದೇ, ಈ ಹಿಂದೆ ಮೇಘಾ ಶೆಟ್ಟಿ ಅವರನ್ನೂ ಧಾರಾವಾಹಿಯಿಂದ ಕೈ ಬಿಡುವ ವಿಚಾರದಲ್ಲಿ ಮಧ್ಯಸ್ತಿಕೆ ವಹಿಸಿ, ಅವರನ್ನು ಮತ್ತೆ ಧಾರಾವಾಹಿಯಲ್ಲಿ ಇರುವಂತೆ ಮಾಡಿದ್ದು ಅನಿರುದ್ಧ. ಹಾಗಾಗಿ ಮೇಘಾ ಶೆಟ್ಟಿ ಪ್ರತಿಕ್ರಿಯೆ ಮಹತ್ವ ಪಡೆದುಕೊಂಡಿದೆ.
ಆದರೆ, ಮೇಘಾ ಶೆಟ್ಟಿ ಎರಡು ದಿನಗಳಿಂದ ನಾನು ಸುದ್ದಿಯನ್ನೇ ಗಮನಿಸಿಲ್ಲ ಎಂದು ಹೇಳುವ ಮೂಲಕ ಜಾರಿಕೊಂಡಿದ್ದಾರೆ. ಸ್ವಲ್ಪ ದಿನದಲ್ಲಿ ಎಲ್ಲವೂ ಸರಿ ಹೋಗಲಿದೆ ಎನ್ನುವ ಆಶಾ ಭಾವನೆಯನ್ನೂ ಅವರು ವ್ಯಕ್ತ ಪಡಿಸಿದ್ದಾರೆ. ಉಳಿದಂತೆ ಅವರು ಮೌನಕ್ಕೆ ಜಾರಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯ ಅನು ಸಿರಿಮನೆ ಪಾತ್ರದ ಮೂಲಕ ಮೇಘಾ ಶೆಟ್ಟಿ ಫೇಮಸ್ ಆಗಿದ್ದಾರೆ. ಈ ಧಾರಾವಾಹಿಯೇ ಅವರಿಗೆ ಹಲವು ಸಿನಿಮಾಗಳಿಗೆ ಅವಕಾಶ ತಂದುಕೊಟ್ಟಿದೆ. ಇದನ್ನೂ ಓದಿ: ನಾಲ್ಕು ಗೋಡೆ ಮಧ್ಯೆ ಜಗಳವಾಡಿರೋದು, ಬೀದಿಗೆ ತರಬಾರದು: ಅನಿರುದ್ಧ್
ಮಾಧ್ಯಮಗಳ ಜೊತೆ ಮಾತನಾಡಿರುವ ಅನಿರುದ್ಧ, ಧಾರಾವಾಹಿ ತಂಡ ಅನೇಕ ಕಲಾವಿದರು ತಮಗೆ ಕಾಲ್ ಮಾಡಿ ಬೆಂಬಲ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಿದ್ದಾರೆ. ಮತ್ತೆ ಈ ಧಾರಾವಾಹಿಯಲ್ಲಿ ನಟಿಸಲು ನಾನು ಸಿದ್ಧ ಎಂದೂ ಹೇಳಿದ್ದಾರೆ. ಆದರೆ, ಮತ್ತೆ ಅವರನ್ನು ಧಾರಾವಾಹಿಗೆ ಕರೆತರುವುದಿಲ್ಲ ಎಂದು ನಿರ್ಮಾಪಕರು ಹೇಳಿದ್ದಾರೆ. ಹೀಗಾಗಿ ಅನಿರುದ್ಧ ನಟಿಸುತ್ತಿದ್ದ ಪಾತ್ರಕ್ಕೆ ಬೇರೆ ನಟರು ಬರುವುದು ಪಕ್ಕಾ ಆಗಿದೆ. ಮೇಘಾ ಶೆಟ್ಟಿ ಅವರೇ ತಮ್ಮ ಪಾತ್ರವನ್ನು ಮುಂದುವರೆಸಿಕೊಂಡು ಹೋಗಲಿದ್ದಾರೆ ಎನ್ನುವ ಮಾಹಿತಿಯೂ ಇದೆ.