ನಿನ್ನೆಯಷ್ಟೇ ಹೃದಯಾಘಾತದಿಂದ ನಿಧನರಾಗಿರುವ ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ (Jolly Bastin), ಮೂಲತಃ ಮೆಕ್ಯಾನಿಕ್ (mechanic). ಬಗೆ ಬಗೆಯ ಬೈಕ್ ಗಳನ್ನು ರಿಪೇರಿ ಮಾಡುತ್ತಿದ್ದವರು, ಸ್ಟಂಟ್ ಡೈರೆಕ್ಟರ್ ಆಗಿದ್ದು ರೋಚಕ ಕಥೆ. ರಿಪೇರಿಗೆ ಬಂದಿದ್ದ ಬೈಕ್ ಗಳಲ್ಲಿ ನಾನಾ ರೀತಿಯ ಸಾಹಸ ಪ್ರದರ್ಶನಗಳನ್ನು ಮಾಡುತ್ತಿದ್ದರು ಜಾಲಿ ಬಾಸ್ಟಿನ್. ಒಂದು ಬಾರಿ ರಸ್ತೆಯಲ್ಲಿ ಬೈಕ್ ನಲ್ಲಿ ಸಾಹಸ ಮಾಡುತ್ತಾ ಹೋಗುತ್ತಿದ್ದಾಗ ರವಿಚಂದ್ರನ್ ಕಣ್ಣಿಗೆ ಬಿದ್ದರು. ಅಲ್ಲಿಂದ ಜಾಲಿ ಬಾಸ್ಟಿನ್ ಬದುಕೇ ಬದಲಾಯಿತು.
ಮೊದ ಮೊದಲು ರವಿಚಂದ್ರನ್ ಅವರಿಗೆ ಡ್ಯೂಪ್ ಆಗಿ ಜಾಲಿ ಬಾಸ್ಟಿನ್ ಕೆಲಸ ಮಾಡಿದರು. ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಯಾವುದೇ ಸಾಹಸ ದೃಶ್ಯಗಳು ಇರಲಿ, ಅಲ್ಲಿ ರವಿಚಂದ್ರನ್ ಬದಲಾಗಿ ಸಾಹಸ ಮಾಡುತ್ತಿದ್ದವರು ಇದೇ ಜಾಲಿ ಮಾಸ್ಟರ್. ಡ್ಯೂಪ್ ಆಗಿದ್ದವರನ್ನು ಸ್ಟಂಟ್ ಡೈರೆಕ್ಟರ್ ಮಾಡಿದ್ದು ಇದೇ ರವಿಚಂದ್ರನ್. ಹಾಗಾಗಿ ರವಿಚಂದ್ರನ್ ಅವರ ಬಹುತೇಕ ಚಿತ್ರಗಳಿಗೆ ಜಾಲಿ ಕೆಲಸ ಮಾಡಿದ್ದರು.
- Advertisement
- Advertisement
ರವಿಚಂದ್ರನ್ ಮಾತ್ರವಲ್ಲ, ಅನೇಕ ಕಲಾವಿದರಿಗೆ ಜಾಲಿ ಬಾಸ್ಟಿನ್ ಡ್ಯೂಪ್ ಆಗಿದ್ದಾರೆ. ಕನ್ನಡದಲ್ಲಿ ಇವರು ಫೇಮಸ್ ಆಗುತ್ತಿದ್ದಂತೆಯೇ ಪಕ್ಕದ ಚಿತ್ರೋದ್ಯಮಕ್ಕೂ ಹಾರಿದರು. ತಮಿಳು, ತೆಲುಗು, ಮಲಯಾಳಂ ಹೀಗೆ ನಾನಾ ಭಾಷೆಗಳ ಚಿತ್ರಗಳಿಗೆ ಜಾಲಿ ಬಾಸ್ಟಿನ್ ಕೆಲಸ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದು.
ಕೇರಳದಲ್ಲಿ 1966ರಲ್ಲಿ ಜಾಲಿ ಬಾಸ್ಟಿನ್ ಹುಟ್ಟಿದ್ದರೂ, ಬೆಳೆದದ್ದು ಬೆಂಗಳೂರಿನಲ್ಲಿ. ಇಲ್ಲಿಯೇ ನೆಲೆಯೂರಿ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರು ದುನಿಯಾ ವಿಜಯ್ ನಿರ್ದೇಶನದ ಭೀಮ ಸಿನಿಮಾಗಾಗಿ ಕೆಲಸ ಮಾಡಿದ್ದರು.