ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಅಂದಾಕ್ಷಣ ಕೋಟೆ ಕೊತ್ತಲುಗಳು ಮಾತ್ರ ನಾವು ಕಾಣುತ್ತೇವೆ. ಆದರೆ ಮಲೆನಾಡನಲ್ಲಿರುವಂತೆ ಇರುವ ನಿಸರ್ಗಧಾಮವೊಂದು ಕೋಟೆನಾಡಲ್ಲಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರೋ ತುಂತುರು ಮಳೆಯಿಂದಾಗಿ ಜೋಗಿಮಟ್ಟಿ ನಿಸರ್ಗಧಾಮ ಹಸಿರು ಸೀರೆ ಹೊದ್ದ ನಾರಿಯಂತೆ ಕಂಗೊಳಿಸುತ್ತಾ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಐತಿಹಾಸಿಕ ಹಿನ್ನಲೆಯ ಪ್ರವಾಸಿ ತಾಣವೆನಿಸಿರೋ ಕೋಟೆನಾಡು ಚಿತ್ರದುರ್ಗ ಕೇವಲ ಬಂಡೆಗಳಿಂದ ಕೂಡಿರೋ ಬಯಲುಸೀಮೆಯೆಂದು ಭಾವಸಿದ್ದಾರೆ. ಆದರೆ ಚಿತ್ರದುರ್ಗ ನಗರದಿಂದ ಕೇವಲ 10 ಕಿ.ಮೀಟರ್ ದೂರದಲ್ಲಿರುವ ಜೋಗಿಮಟ್ಟಿ ಗಿರಿಧಾಮ ಅವರ ಭಾವನೆಯನ್ನ ಅಲ್ಲೆಗೆಳೆಯುವಂತಿದೆ. ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಷ್ಟು ವಿಶಾಲವಾಗಿರುವ ಈ ಕಾಯ್ದಿಟ್ಟ ಅರಣ್ಯ ಪ್ರದೇಶ ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶಗಳ ಪೈಕಿ ಒಂದಾಗಿದೆ.
Advertisement
Advertisement
ಇಂಥ ಅಪರೂಪದ ಗಿರಿಧಾಮ ಮಳೆಗಾಲ ಹಾಗೂ ಚಳಿಗಾಲದಲ್ಲಂತೂ ಮಂಜಿನ ಮಡಿಕೇರಿ, ಸೊಬಗಿನ ಮಲೆನಾಡನ್ನೇ ನಾಚಿಸುವಂತೆ ರೂಪುಗೊಳ್ಳುತ್ತದೆ. ಕಳೆದ ಒಂದು ವಾರದಿಂದ ಜಿನುಗುತ್ತಿರುವ ಮಳೆಯಿಂದಾಗಿ ಜೋಗಿಮಟ್ಟಿ ಮತ್ತಷ್ಟು ಹಚ್ಚಹಸಿರಾಗಿ ಕಂಗೊಳಿಸುತ್ತಿದೆ. ಮೋಡದ ಅಲೆಗಳು ಜೋಗಿಮಟ್ಟಿಯ ಗಿರಿಧಾಮಗಳಿಗೆ ಮುತ್ತಿಟ್ಟು ನಲಿಯುತ್ತಿವೆ. ಜೋಗಿಮಟ್ಟಿ ಮೇಲ್ಭಾಗದಲ್ಲಿರುವ ವೀವ್ ಪಾಯಿಂಟ್ ಹಾಗೂ ಅತಿಥಿಗೃಹದ ಬಳಿಯ ಪ್ರಕೃತಿಕ ಸೊಬಗಂತೂ ಮೈಮರೆಸುತ್ತದೆ. ಹೀಗಾಗಿ ಕಳೆದ ವಾರದಿಂದ ಜೋಗಿಮಟ್ಟಿಗೆ ತೆರಳಿ ಸೌಂದರ್ಯದ ಸವಿ ಸವಿಯುವವರ ಸಂಖ್ಯೆ ಹೆಚ್ಚಾಗಿದೆ. ಜೋಗಿಮಟ್ಟಿಯ ನಿಸರ್ಗದಲ್ಲಿ ಪರಿಸರ ಪ್ರಿಯರು ಸೆಲ್ಫಿ ತೆಗೆದುಕೊಳ್ಳುವುದು, ಗ್ರೂಪ್ ಪೋಟೋ ಕ್ಲಿಕ್ಕಿಸಿಕೊಳ್ಳುವ ದೃಶ್ಯಗಳು ಸಾಮಾನ್ಯವಾಗಿದೆ.
Advertisement
ಇನ್ನು ಕೊರೆಯುವ ಚಳಿ, ಬಿರುಗಾಳಿ ಮತ್ತು ಕೈಗೆ ಸಿಗುವ ಮೋಡಗಳ ನಡುವೆ ತೇಲುವ ಜನ ಸಖತ್ ಏಂಜಾಯ್ ಮಾಡುತ್ತಿದ್ದಾರೆ. ಕೆಲವರು ಕೇಕೆ ಹಾಕಿ ಖುಷಿಪಡುತ್ತಾರೆ, ಹಾಡು ಗುನುಗುತ್ತ ಹೆಜ್ಜೆ ಹಾಕುತ್ತಾರೆ. ಕೋಟೆನಾಡಿನ ಪಾಲಿಗಂತೂ ಈ ನಿಸರ್ಗದ ಮಡಿಲು ಧರೆಯ ಮೇಲಿನ ಸ್ವರ್ಗವೇ ಆಗಿದೆ ಎಂದು ನಿಸರ್ಗ ಪ್ರಿಯರು ಕರೆಯುತ್ತಾರೆ.
Advertisement
ಜೋಗಿಮಟ್ಟಿ ಕಾಯ್ದಿಟ್ಟ ಅರಣ್ಯ ಪ್ರದೇಶ ಇತ್ತೀಚೆಗೆ ವನ್ಯಜೀವಗಳ ಧಾಮವಾಗಿಯೂ ಘೋಷಿಸಲ್ಪಟ್ಟಿದೆ. ಇಲ್ಲಿ ಕರಡಿ, ಜಿಂಕೆ, ಚಿರತೆಯಂಥ ಪ್ರಾಣಿಗಳಿವೆ. ನವಿಲು ಮತ್ತಿತರೆ ಪಕ್ಷಿಗಳಂತೂ ಲೆಕ್ಕವಿಲ್ಲದಷ್ಟಿವೆ. ನಿತ್ಯ ನೂರಾರು ಜನ ಈ ನಿಸರ್ಗ ಸೌಂದರ್ಯ ಸವಿಯಲು ಜೋಗಿಮಟ್ಟಿಗೆ ಭೇಟಿ ನೀಡುತ್ತಾರೆ. ಆದ್ದರಿಂದ ಅರಣ್ಯ ಇಲಾಖೆ ಈ ಜೋಗಿಮಟ್ಟಿಗೆ ಇನ್ನಷ್ಟು ಮೂಲ ಸೌಕರ್ಯಗಳನ್ನು ಕಲ್ಪಿಸಿ ಅರಣ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು ಎಂದು ಭೇಟಿ ನೀಡುವ ಪ್ರವಾಸಿಗರು ಮನವಿ ಮಾಡಿಕೊಂಡಿದ್ದಾರೆ.