ನಿರ್ದೇಶಕ ಜೋಗಿ ಪ್ರೇಮ್ (Jogi Prem) ಕುರಿತಾಗಿ ಮತ್ತೊಂದು ಹೊಸ ಸುದ್ದಿ ಬಂದಿದೆ. ಸದ್ಯ ಪ್ರೇಮ್ ಕೆಡಿ ಸಿನಿಮಾದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ಅವರು ಸಲ್ಮಾನ್ ಖಾನ್ (Salman Khan) ಗಾಗಿ ಸಿನಿಮಾವೊಂದನ್ನು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಕನ್ನಡದ ಮತ್ತೋರ್ವ ನಿರ್ದೇಶಕ ಬಾಲಿವುಡ್ (Bollywood) ಬಾಗಿಲು ತಟ್ಟಿದಂತಾಗುತ್ತದೆ.
ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಲ್ಮಾನ್ ಖಾನ್ ಅವರಿಗಾಗಿ ಸುದೀಪ್ ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕಿತ್ತು. ಕಥೆಯನ್ನು ಸಲ್ಮಾನ್ ಖಾನ್ ಗೆ ಒಪ್ಪಿಸಿರುವ ಕುರಿತು ಕಿಚ್ಚ ಈ ಹಿಂದೆಯೇ ಹೇಳಿಕೊಂಡಿದ್ದರು. ಆದರೆ, ಸುದೀಪ್ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿ ಹೋದರು. ಹಾಗಾಗಿ ಸದ್ಯಕ್ಕೆ ಸಲ್ಮಾನ್ ಜೊತೆಗಿನ ಸಿನಿಮಾ ಅನುಮಾನ ಎನ್ನಲಾಗುತ್ತಿದೆ.
ಕಿಚ್ಚ ಸುದೀಪ್ ಅವರಿಗೆ ಸಿಕ್ಕಿದ್ದ ಅವಕಾಶವೇ ಪ್ರೇಮ್ ಅವರಿಗೆ ವರ್ಗಾವಣೆ ಆಗಿದ್ಯಾ? ಗೊತ್ತಿಲ್ಲ. ಆದರೆ, ಪ್ರೇಮ್ ನಿರ್ದೇಶನ ಮಾಡುತ್ತಾರೆ ಎನ್ನಲಾದ ಚಿತ್ರವನ್ನು ಸಜೀಸ್ ನಡಿಯಾಲ್ ಅನ್ನುವವರು ನಿರ್ಮಾಣ ಮಾಡಲಿದ್ದಾರಂತೆ. ಇದಿಷ್ಟು ವಿಷಯಗಳು ಗಾಂಧಿನಗರದಲ್ಲಿ ಭಾರೀ ಗಿರಿಕಿ ಹೊಡೆಯುತ್ತಿವೆ.
ಕೆಡಿ ಸಿನಿಮಾದ ನಂತರ ಇದೇ ಪ್ರೇಮ್ ಅವರು ದರ್ಶನ್ ಅವರಿಗಾಗಿ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಕೆ.ವಿಎನ್ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ ಎನ್ನುವುದೂ ಸುದ್ದಿ ಆಗಿತ್ತು. ಮೊದಲು ದರ್ಶನ್ ಅವರ ಸಿನಿಮಾವಾಗುತ್ತಾ? ಅಥವಾ ಸಲ್ಮಾನ್ ಚಿತ್ರಕ್ಕೆ ಪ್ರೇಮ್ ಕೈ ಹಾಕ್ತಾರಾ ಕಾದು ನೋಡಬೇಕು.