ಜೈಪುರ: ಕಳೆದ ಡಿಸೆಂಬರ್ ನಲ್ಲಿ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಜೋಧ್‍ಪುರ್ ಕೋರ್ಟ್ ರಾಜಸ್ಥಾನ ಪೊಲೀಸರಿಗೆ ಸೂಚನೆ ನೀಡಿದೆ.
ಡಾ.ಭೀಮ್‍ರಾವ್ ಅಂಬೇಡ್ಕರ್ ಅವರನ್ನು ಅವಮಾನಗೊಳಿಸುವಂತೆ ಟ್ವೀಟ್ ಮಾಡಿದ್ದ ಆರೋಪ ಹೊತ್ತಿರೊ ಹಾರ್ದಿಕ್ ಪಾಂಡ್ಯ ವಿರುದ್ಧ ಎಫ್‍ಐಆರ್ ದಾಖಲಿಸಲು ರಾಜಸ್ಥಾನ್ ಪೊಲೀಸರಿಗೆ ಬುಧವಾರ ಜೋಧ್‍ಪುರ್ ನ್ಯಾಯಾಲಯ ಆದೇಶ ನೀಡಿದೆ. ಕ್ರಿಕೆಟಿಗನ ವಿರುದ್ಧ ಅರ್ಜಿಯನ್ನು ಆಲಿಸಿದ ಬಳಿಕ ನ್ಯಾಯಾಲಯ ಪೊಲೀಸರಿಗೆ ಈ ಆದೇಶ ನೀಡಿದೆ.
Advertisement
ವರದಿಗಳ ಪ್ರಕಾರ, ವಕೀಲರು ಹಾಗೂ ರಾಷ್ಟ್ರೀಯ ಭೀಮ ಸೇನಾ ಸದಸ್ಯರಾಗಿರುವ ಡಿ.ಆರ್.ಮೇಘ್ವಾಲ್, ಹಾರ್ದಿಕ್ ಪಾಂಡ್ಯಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಎಸ್‍ಸಿ-ಎಸ್‍ಟಿ ಕಾಯ್ದೆಯಡಿ ಪಾಂಡ್ಯಾ ವಿರುದ್ಧ ಅರ್ಜಿ ಸಲ್ಲಿಸಿದ್ದರು.
Advertisement
Advertisement
ಮೇಘ್ವಾಲ್ ಅವರು ಕ್ರಿಕೆಟಿಗನ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ರಾಜಸ್ಥಾನದ ಲುನಿ ಪೊಲೀಸ್ ಠಾಣೆಗೆ ಹೋದಾಗ, ಪೊಲೀಸ್ ಅಧಿಕಾರಿಗಳು ಕೇಸ್ ದಾಖಲಿಸಲು ನಿರಾಕರಿಸಿದ್ದರು. ಇದರ ನಂತರ ಅವರು ಜೋದ್‍ಪುರ್ ನ್ಯಾಯಾಲಯದ ಮೊರೆ ಹೋಗಿದ್ದರು ಎಂದು ವರದಿಯಾಗಿದೆ.
Advertisement
ಪಾಂಡ್ಯ ಅವರು ಡಿಸೆಂಬರ್ ನಲ್ಲಿ ಪೋಸ್ಟ್ ಮಾಡಿದ್ದರೆನ್ನಲಾದ ಟ್ವೀಟನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. “ಯಾವ ಅಂಬೇಡ್ಕರ್??? ಅಡ್ಡ ಕಾನೂನು ಮತ್ತು ಸಂವಿಧಾನವನ್ನು ರಚಿಸಿದವರಾ? ಅಥವಾ ಈ ದೇಶದಲ್ಲಿ ಮೀಸಲಾತಿ ಎಂಬ ರೋಗವನ್ನು ಹರಡಿದವರಾ?” ಎಂದು ಪಾಂಡ್ಯಾ ಟ್ವೀಟ್ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಹಾರ್ದಿಕ್ ಪಾಂಡ್ಯ ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಆಗಿದ್ದು, ಅವರ ಆಟದ ವೈಖರಿಯನ್ನು ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಅವರೊಂದಿಗೆ ಹೋಲಿಸಲಾಗುತ್ತದೆ. ಇತ್ತೀಚಿಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಹರಾಜಿನಲ್ಲಿ, ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ತಂಡ ಬರೋಬ್ಬರಿ 11 ಕೋಟಿ ರೂಪಾಯಿಗಳನ್ನು ನೀಡಿ ಉಳಿಸಿಕೊಂಡಿದೆ.