ರಾಯಚೂರು: ಲಾಕ್‍ಡೌನ್ ಹಿನ್ನೆಲೆ ನಗರ ಪ್ರದೇಶದಲ್ಲಿದ್ದ ಕೂಲಿ ಕಾರ್ಮಿಕರಿಗೆ ಉದ್ಯೋಗವಿಲ್ಲದಂತಾಗಿದೆ. ಕೂಲಿಕಾರ್ಮಿಕರಿಗೆ ಉದ್ಯೋಗ ನೀಡುವ ಉದ್ದೇಶದಿಂದ ನರೇಗಾ ಕಾಮಗಾರಿ ಆರಂಭಿಸಲಾಗಿದೆ. ಆದರೆ ರಾಯಚೂರಿನಲ್ಲಿ ನಿಗಿಧಿತ ಪ್ರಮಾಣದಲ್ಲಿ ಕೂಲಿಕಾರರಿಗೆ ಕೆಲಸ ಸಿಗುತ್ತಿಲ್ಲ, ಕಾರಣ ಕೆಲಸ ಮಾಡುವ ಸ್ಥಳದಲ್ಲಿ ಕನಿಷ್ಠ ಸೌಲಭ್ಯಗಳೇ ಇಲ್ಲ ಎಂಬುದು ಕೂಲಿ ಕಾರ್ಮಿಕರ ಅಳಲು.
ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರನ್ನು ರಾಯಚೂರು ಜಿಲ್ಲೆ ಹೊಂದಿದ್ದು, ಇಲ್ಲಿ ಸರಿಯಾದ ಉದ್ಯೋಗ, ಕೆಲಸಕ್ಕೆ ತಕ್ಕಂತೆ ಕೂಲಿ ಸಿಗದ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ಉದ್ಯೋಗ ಅರಸಿಕೊಂಡು ದೂರದ ಬೆಂಗಳೂರು, ಮುಂಬೈ, ಪೂನಾ ಸೇರಿದಂತೆ ವಿವಿಧ ನಗರಗಳಿಗೆ ತೆರಳಿದ್ದಾರೆ.
Advertisement
Advertisement
ಸದ್ಯ ನಗರ ಪ್ರದೇಶದಲ್ಲಿ ಉದ್ಯೋಗವಿಲ್ಲದೆ ಕೂಲಿಕಾರರು ತಮ್ಮ ಗ್ರಾಮದತ್ತ ಬಂದಿದ್ದಾರೆ. ರಾಯಚೂರು ಜಿಲ್ಲೆಯೊಂದರಲ್ಲಿಯೇ ಸುಮಾರು 60 ಸಾವಿರ ಕೂಲಿಕಾರ್ಮಿಕರು ವಾಪಾಸ್ಸಾಗಿದ್ದಾರೆ. ಉದ್ಯೋಗವಿಲ್ಲದೆ ಪರದಾಡುತ್ತಿರುವವರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ನೀಡಲಾಗುತ್ತಿದೆ. ಆದರೆ ಗುಳೆ ಹೋಗಿ ಬಂದವರಿಗೆ ಸದ್ಯ ಉದ್ಯೋಗ ಕಾರ್ಡ್ ಇಲ್ಲದೆ ಹಲವರಿಗೆ ಉದ್ಯೋಗ ಸಿಗುತ್ತಿಲ್ಲ. ಇತ್ತ ವಲಸೆ ಬಂದ ತಕ್ಷಣ ಅವರನ್ನು ಹೋಂ ಕ್ವಾರೆಂಟೈನ್ ಮಾಡುತ್ತಿರುವದರಿಂದ ಅವರು ಹೊರಬರಲು ಸಹ ಆಗುತ್ತಿಲ್ಲ.
Advertisement
ಕೆಲಸ ಸಮಯದಲ್ಲಿ ಕಾರ್ಮಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಆದರೆ ಕಾರ್ಮಿಕರು ಗುಂಪು ಕೂಡಿ ಟ್ರ್ಯಾಕ್ಟರಿನಲ್ಲಿ ಕೆಲಸಕ್ಕೆ ಆಗಮಿಸುತ್ತಿದ್ದಾರೆ. ಇಲ್ಲಿ ಕಾರ್ಮಿಕರಿಗೆ ಮಾಸ್ಕ್ ವಿತರಿಸಿಲ್ಲ. ಜಿಲ್ಲೆಯಲ್ಲಿ ಒಟ್ಟು 2.53 ಲಕ್ಷ ಕೂಲಿಕಾರರು ಉದ್ಯೋಗ ಕಾರ್ಡ್ ಹೊಂದಿದ್ದು, ವಲಸೆ ಬಂದವರಲ್ಲಿ ಶೇ.10ಕ್ಕಿಂತ ಅಧಿಕ ಕೂಲಿಕಾರರಿಗೆ ಉದ್ಯೋಗ ಕಾರ್ಡ್ ಇಲ್ಲ.
Advertisement
ಈ ಕುರಿತು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರ ಬಳಿ ಪ್ರಶ್ನಿಸಿದರೆ, ಈಗ 60 ಸಾವಿರ ಜನ ವಿವಿಧ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಕಾರ್ಡ್ ಇಲ್ಲದವರು ಅರ್ಜಿ ಹಾಕಿದರೆ ಅವರಿಗೆ ಕಾರ್ಡ್ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇತ್ತ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿದವರಿಗೆ ಸಕಾಲದಲ್ಲಿ ಕೂಲಿ ಹಣ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ ಸಿಇಓ ಲಕ್ಷ್ಮಿಕಾಂತರೆಡ್ಡಿ ಹೇಳಿದ್ದಾರೆ. ಸರ್ಕಾರ ಗುಳೆ ಹೋಗಿ ವಾಪಸ್ ಬಂದವರಿಗೂ ಕೆಲಸ ಕೊಡಲು ಮುಂದಾಗಿದ್ದು, ಇಲ್ಲಿರುವ ಲೋಪದೋಷಗಳನ್ನು ಸ್ಥಳೀಯ ಮಟ್ಟದಲ್ಲಿ ಬಗೆಹರಿಸಬೇಕಾಗಿದೆ.