ಧಾರವಾಡ: ನೈರುತ್ಯ ರೈಲ್ವೇಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಯುವಕರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪದ ಮೇಲೆ ನಾಲ್ವರು ವಂಚಕರನ್ನು ಇಲ್ಲಿನ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.
16 ಯುವಕರಿಂದ ತಲಾ ಮೂರು ಲಕ್ಷ ರೂ. ಪಡೆದು ಹುಬ್ಬಳ್ಳಿಯಲ್ಲಿ ದೈಹಿಕ ಹಾಗೂ ಮೌಖಿಕ ಪರೀಕ್ಷೆ ನಕಲಿ ಪರೀಕ್ಷೆ ನಡೆಸುತ್ತಿದ್ದ ರೈಲ್ವೇ ನೌಕರ ಸೇರಿ ನಾಲ್ವರನ್ನು ರೈಲ್ವೇ ರಕ್ಷಣಾ ದಳ (ಆರ್‍ಪಿಎಫ್) ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
Advertisement
ಚಾಮರಾಜ ನಗರ ಜಿಲ್ಲೆಯ ಕೊಳ್ಳೇಗಾಲದ ಮೂಲದ ವಂಚಕರಾದ ಆನಂದ ಪಿ (36), ರಮೇಶ್ (42) ಹಾಗೂ ಮನೋಜ್ (24) ಮತ್ತು ಸಚಿನ್ (32) ಬಂಧಿತರು. ಇದರಲ್ಲಿ ಆನಂದ ಪಿ ಹಾಗೂ ರಮೇಶ ಇಬ್ಬರೂ ರೈಲ್ವೇ ಇಲಾಖೆಯ ಸಿಬ್ಬಂದಿಗಳಾಗಿದ್ದರು.
Advertisement
Advertisement
ಹಲವು ವರ್ಷಗಳಿಂದ ಅಭ್ಯರ್ಥಿಗಳಿಗೆ ದೈಹಿಕ ಹಾಗೂ ಮೌಖಿಕ ಪರೀಕ್ಷೆ ನಡೆಸಿದ್ದರು. ನೈಋತ್ಯ ರೈಲ್ವೇ ಮುಖ್ಯ ಕಚೇರಿ ಹುಬ್ಬಳ್ಳಿಯಲ್ಲಿ ಸೋಮವಾರ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಯುವಕರಿಗೆ ತಿಳಿಸಿದ್ದರು. ಹೀಗಾಗಿ ರೈಲ್ವೇ ಆಸ್ಪತ್ರೆಯ ಒಂದು ಕೋಣೆಯಲ್ಲಿ ನಕಲಿ ವೈದ್ಯಕೀಯ ತಪಾಸಣೆ ಏರ್ಪಾಟು ಮಾಡಿದ್ದರು. ಖಚಿತ ಮಾಹಿತಿ ಮೇರೆಗೆ ಆರ್‍ಪಿಎಫ್ ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
ಆರೋಪಿಗಳಿಗೆ ರೈಲ್ವೇ ಆಸ್ಪತ್ರೆಯಲ್ಲೇ ನಕಲಿ ವೈದ್ಯಕೀಯ ಪರೀಕ್ಷೆ ಮಾಡಿಸುವಷ್ಟು ಧೈರ್ಯ ಇದೆ ಎಂದರೆ ಪ್ರಕರಣದಲ್ಲಿ ಮೇಲಾಧಿಕಾರಿಗಳೂ ಶಾಮೀಲಾಗಿದ್ದಾರೆಯೇ ಎಂಬ ಶಂಕೆ ಮೂಡುತ್ತಿದೆ. ಪ್ರಕರಣದಲ್ಲಿ ಇನ್ನೂ ಹಲವರು ವಂಚನೆಗೊಳಗಾಗಿರುವ ಸಾಧ್ಯತೆಗಳಿದ್ದು, ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.
ಈ ನಡುವೆ ಬಂಧಿತ ನಾಲ್ವರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ವಿಚಾರಣೆ ನೆಡೆಸುತ್ತಿದ್ದಾರೆ.