– ವಿದ್ಯಾರ್ಥಿಗಳ ಮೇಲೆ ಸೈಕಲ್ ಎಸೆದ ವ್ಯಕ್ತಿ
ನವದೆಹಲಿ: ವಿದ್ಯಾರ್ಥಿ ಸಂಘದ ಚುನಾವಣೆ ವಿಚಾರವಾಗಿ ಜೆಎನ್‌ಯು (JNU Students) ವಿದ್ಯಾರ್ಥಿ ಗುಂಪುಗಳು ಗಲಾಟೆ ಮಾಡಿಕೊಂಡಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಗುರುವಾರ ರಾತ್ರಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಮತ್ತು ಎಡ ಬೆಂಬಲಿತ ಗುಂಪುಗಳ ನಡುವಿನ ಗಲಾಟೆಯಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (JNU) ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೀದಿ ಸರ್ಕಾರ ಉರುಳಿಸೋ ವರೆಗೂ ತಲೆ ಕೂದಲು ಬೆಳೆಸಲ್ಲ: ಶಪಥ ಮಾಡಿದ್ದ ‘ಕೈ’ ನಾಯಕ ಬಿಜೆಪಿ ಸೇರ್ಪಡೆ
ಮುಂಬರುವ ವಿದ್ಯಾರ್ಥಿಗಳ ಒಕ್ಕೂಟದ ಚುನಾವಣೆಗಾಗಿ ಸಾಮಾನ್ಯ ಸಭೆ ನಡೆಸಲಾಗಿತ್ತು. ಈ ವೇಳೆ ಪರಸ್ಪರ ವಿದ್ಯಾರ್ಥಿಗಳು ಹೊಡೆದಾಡಿಕೊಳ್ಳುತ್ತಿರುವ ದೃಶ್ಯದ ವೀಡಿಯೋ ವೈರಲ್ ಆಗಿದೆ. ಕಳೆದ ರಾತ್ರಿ ಭಾಷಾ ಶಾಲೆಯಲ್ಲಿ ಚುನಾವಣಾ ಸಮಿತಿ ಸದಸ್ಯರ ಆಯ್ಕೆ ವಿಚಾರದಲ್ಲಿ ಗುಂಪುಗಳ ನಡುವೆ ವಾಗ್ವಾದ ನಡೆದು ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಒಬ್ಬ ವಿದ್ಯಾರ್ಥಿಯ ತಲೆಯಿಂದ ರಕ್ತಸ್ರಾವವಾಗುತ್ತಿರುವುದು ಮತ್ತು ವ್ಯಕ್ತಿಯೊಬ್ಬ ವಿದ್ಯಾರ್ಥಿಗಳ ಗುಂಪಿನ ಮೇಲೆ ಸೈಕಲ್ ಎಸೆಯುತ್ತಿರುವ ದೃಶ್ಯವು ವೀಡಿಯೋಗಳಲ್ಲಿ ಸೆರೆಯಾಗಿದೆ. ಗಲಾಟೆಯಲ್ಲಿ ಗಾಯಗೊಂಡವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜೆಎನ್‌ಯು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: LPG Price Hike: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 25 ರೂ. ಹೆಚ್ಚಳ
ಘಟನೆಯ ಕುರಿತು ವಿಶ್ವವಿದ್ಯಾನಿಲಯ ಆಡಳಿತವು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಘರ್ಷಣೆ ಸಂಬಂಧ ವಿದ್ಯಾರ್ಥಿ ಗುಂಪುಗಳು ಪರಸ್ಪರ ಮೇಲೆ ಆರೋಪ ಮಾಡಿದ್ದಾರೆ. ಆದರೆ, ಈ ಕುರಿತು ಯಾವುದೇ ದೂರುಗಳು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಎಡ-ಸಂಯೋಜಿತ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಶನ್ (ಡಿಎಸ್‌ಎಫ್) ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್‌ಎ) ಎಬಿವಿಪಿ ಸದಸ್ಯರು ಸಭೆಗೆ ಅಡ್ಡಿಪಡಿಸಿದರು. ವಿದ್ಯಾರ್ಥಿಗಳು ಮತ್ತು ಸೆಕ್ಯುರಿಟಿ ಗಾರ್ಡ್‌ಗಳಿಗೆ ಬೆದರಿಕೆ ಹಾಕಿದರು. ಜಾತಿ ನಿಂದನೆ ಪದ ಬಳಕೆ ಕೂಡ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.