ನವದೆಹಲಿ: ಜವಾಹರ್‍ಲಾಲ್ ನೆಹರು ವಿಶ್ವದ್ಯಾಲಯ(ಜೆಎನ್‍ಯು)ಕ್ಕೆ ಪ್ರಧಾನಿ ನರೇಂದ್ರ ಮೋದಿ(ಎಂಎನ್‍ಯು) ಹೆಸರನ್ನು ಮರುನಾಮಕರಣ ಮಾಡಬೇಕು ಎಂದು ದೆಹಲಿ ವಾಯವ್ಯ ಕ್ಷೇತ್ರದ ಸಂಸದ ಹನ್ಸ್ ರಾಜ್ ಹನ್ಸ್ ಅವರು ಹೇಳಿದ್ದು ಚರ್ಚೆಗೆ ಗ್ರಾಸವಾಗಿದೆ.
ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಏಕ್ ಶಾಮ್ ಶಹೀದಾನ್ ಕೆ ನಾಮ್’ ಕಾರ್ಯಕ್ರಮದಲ್ಲಿ ಭಗವಹಿಸಿ ಮಾತನಾಡಿದ ಅವರು, ಕಾಶ್ಮೀರದ ಕುರಿತು ಮಾತನಾಡುವಾಗ ಜವಾಹರ್‍ಲಾಲ್ ನೆಹರು ಹಾಗೂ ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದರು. ಹಿಂದೆ ನಮ್ಮ ಹಿರಿಯರು ಮಾಡಿದ ತಪ್ಪುಗಳ ತೀವ್ರತೆಯನ್ನು ಇದೀಗ ನಾವು ಎದುರಿಸುತ್ತಿದ್ದೇವೆ ಎಂದು ನೆಹರು ಹಾಗೂ ಗಾಂಧಿ ಕುಟುಂಬದ ವಿರುದ್ಧ ಕಿಡಿ ಕಾರಿದರು.
Advertisement
#WATCH Delhi: BJP's Hans Raj Hans speaks in JNU on Article 370 abrogation. Says "Dua karo sab aman se rahein, bomb na chale…Hamare buzurgon ne galatiyan ki hain hum bhugat rahe hain…Main kehta hoon iska naam MNU kar do, Modi ji ke naam pe bhi to kuch hona chahiye…" (17.08) pic.twitter.com/gejRVIXhZa
— ANI (@ANI) August 18, 2019
Advertisement
ನಾವೆಲ್ಲರೂ ಶಾಂತಿಯುತವಾಗಿ ಬದುಕುತ್ತಿದ್ದೇವೆ. ಈ ಸ್ಥಳವನ್ನು ಬಾಂಬ್ ದಾಳಿಗಳು ಆವರಿಸಿಕೊಳ್ಳಬಾರದು ಎಂದು ಪ್ರಾರ್ಥಿಸಿ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿ ಮುಗಿದ ನಂತರ ಜೆಎನ್‍ಯುಗೆ ಎಂಎನ್‍ಯು ಎಂದು ಮರುನಾಮಕರಣ ಮಾಡಬೇಕು. ಅಲ್ಲದೆ, ಮೋದಿ ಅವರ ನೆನಪಿಗಾಗಿ ಯಾವುದಕ್ಕಾದರೂ ಅವರ ಹೆಸರಿಡಬೇಕಿದೆ ಎಂದು ಹನ್ಸ್ ರಾಜ್ ತಿಳಿಸಿದ್ದಾರೆ.
Advertisement
ಈ ಹೇಳಿಕೆ ನಂತರ ಸಂಸದ ಹನ್ಸ್ ರಾಜ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಜವಾಹರ್‍ಲಾಲ್ ನೆಹರು ಅವರು ಈ ಹಿಂದೆ(ಜಮ್ಮು ಕಾಶ್ಮೀರವನ್ನು ಉಲ್ಲೇಖಿಸಿ) ತಪ್ಪುಗಳನ್ನು ಮಾಡಿದ್ದಾರೆ ಎಂದು ಕಿಡಿ ಕಾರಿದರು.
Advertisement
ವಿವಿಗೆ ಮರುನಾಮಕರಣ ಮಾಡುವ ಕುರಿತ ತಮ್ಮ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಮೊದಲ ಬಾರಿಗೆ ಜೆಎನ್‍ಯುಗೆ ಬಂದಿದ್ದು, ಜೆಎನ್‍ಯು ಬಗ್ಗೆ ಸಾಕಷ್ಟು ಕೇಳಿದ್ದೇನೆ. ಆದರೆ, ಈಗ ಮೋದಿ ಸರ್ಕಾರದ ಪ್ರಯತ್ನದಿಂದಾಗಿ ವಿವಿಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಹೀಗಾಗಿ ಜೆಎನ್‍ಯುಗೆ ‘ಮೋದಿ ನರೇಂದ್ರ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಬೇಕೆಂದು ಹೇಳಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಬಿವಿಪಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಹನ್ಸ್ ರಾಜ್ ಮಾತ್ರವಲ್ಲದೆ, ಸಂಸದ ಮನೋಜ್ ತಿವಾರಿ ಸಹ ಇದೇ ರೀತಿ ಹೇಳಿಕೆ ನೀಡಿದ್ದಾರೆ.
ನಾವಿಲ್ಲಿ ಪಾಸಿಟಿವ್ ಜೆಎನ್‍ಯು ನೋಡುತ್ತಿದ್ದೇವೆ. ಈ ಹಿಂದೆ ಕೆಲವರು ವಿಶ್ವವಿದ್ಯಾಲಯದಲ್ಲೇ ‘ಭಾರತ್ ತೆರೆ ತುಕ್ಡೆ ಹೋಂಗೆ’ ಘೋಷಣೆಗಳನ್ನು ಕೂಗಿದ್ದರು. ಇದೀಗ ವಿವಿ ಬೆಳೆದು ಸಮಯಕ್ಕೆ ತಕ್ಕಂತೆ ಬದಲಾವಣೆಯಾಗಿದೆ. ಈಗ ವಿದ್ಯಾರ್ಥಿಗಳು ‘ವಂದೇ ಮಾತರಂ’ ಹಾಗೂ ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳನ್ನು ಕೂಗುವುದನ್ನು ನಾವು ಕೇಳಿದ್ದೇವೆ ಎಂದು ತಿವಾರಿ ಹೇಳಿದರು.
ಜೆಎನ್‍ಯು ಹೆಸರನ್ನು ಬದಲಿಸುವ ಹನ್ಸ್ ರಾಜ್ ಅವರ ಹೇಳಿಕೆ ಕುರಿತು ತಿವಾರಿ ಪ್ರತಿಕ್ರಿಯಿಸಿ, ಕೆಲವೊಮ್ಮೆ ಉತ್ಸಾಹದಿಂದ ಹೇಳಿಕೆಗಳನ್ನು ನೀಡುತ್ತೇವೆ. ಹಾಗೆ ಹೇಳಿದ ಮಾತ್ರಕ್ಕೆ ಅದನ್ನೇ ಮಾಡುತ್ತಾರೆ ಎಂದಲ್ಲ. ಹನ್ಸ್ ರಾಜ್ ಅವರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಮೋದಿ ಅವರನ್ನು ಹೆಚ್ಚು ಇಷ್ಟ ಪಡುವ ಕಾರಣದಿಂದ ಆ ರೀತಿ ಹೇಳಿದ್ದಾರೆ ಎಂದು ತಿವಾರಿ ಸ್ಪಷ್ಟಪಡಿಸಿದರು.
ಇತ್ತೀಚೆಗೆ ದೆಹಲಿಯ ಬಿಜೆಪಿ ಮುಖ್ಯಸ್ಥರೊಬ್ಬರು ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಓಕೆ)ವನ್ನು ವಾಪಸ್ ಪಡೆಯಲು ಭಾರತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಒಂದು ಭಾಗ ಎಂದು ರಾಷ್ಟ್ರದ ಪ್ರತಿ ಮಗು ಹೇಳುತ್ತದೆ. ಹೀಗಾಗಿ ಅದನ್ನು ಹಿಂಪಡೆಯಲು ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರತಿಪಾದಿಸಿದ್ದರು.