ಬೆಂಗಳೂರು: 2019 ಐಪಿಎಲ್ ಆವೃತ್ತಿಗೆ ಭರ್ಜರಿ ಸಿದ್ಧತೆಯಲ್ಲಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಸಹಾಯಕ ಕೋಚ್ ಆಗಿ ಜಮ್ಮು ಕಾಶ್ಮೀರದ ಮಾಜಿ ಆಟಗಾರ ಮಿಥುನ್ ಮನ್ಹಾಸ್ ಆಯ್ಕೆ ಆಗಿದ್ದಾರೆ.
ಈ ಬಾರಿ ಕಪ್ ಗೆಲ್ಲುವ ವಿಶ್ವಾಸದಲ್ಲಿ ಕೊಹ್ಲಿ ನಾಯಕತ್ವದ ಆರ್‌ಸಿಬಿ ಪಡೆ ಇದ್ದು, ತಂಡದ ಫ್ರಾಂಚೈಸಿಗಳು ತಂಡದ ಬೆಂಬಲಕ್ಕೆ ಇರುವ ಸಿಬ್ಬಂದಿಯನ್ನು ಕೂಡ ಈ ಬಾರಿ ಬದಲಾವಣೆ ಮಾಡಿ ಹೊಸ ಹುರುಪಿನೊಂದಿಗೆ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿವೆ. ಇದರ ಭಾಗವಾಗಿಯೇ ತಂಡದ ಮುಖ್ಯ ಕೋಚ್ ಆಗಿ ಗ್ಯಾರಿ ಕಸ್ರ್ಟನ್, ಬೌಲಿಂಗ್ ಕೋಚ್ ಆಗಿ ಆಶಿಶ್ ನೆಹ್ರಾರನ್ನು ನೇಮಕ ಮಾಡಲಾಗಿತ್ತು.
ಸದ್ಯ ಸಹಾಯಕ ಕೋಚ್ ಆಗಿ ಆಯ್ಕೆ ಆಗಿರುವ ಮಿಥುನ್ ಅವರು ಜಮ್ಮು ಕಾಶ್ಮೀರದ ಆಟಗಾರರಾಗಿದ್ದು, ದೆಹಲಿ ತಂಡದ ಪರ ನಾಯಕತ್ವವನ್ನು ಕೂಡ ವಹಿಸಿದ್ದರು. 7 ಐಪಿಎಲ್ ಆವೃತ್ತಿಗಳಲ್ಲಿ ವಿವಿಧ ತಂಡಗಳ ಆಡಿರುವ ಮಿಥುನ್ ಅವರು, ಕಳೆದ ವರ್ಷ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಸಹಾಯಕ ಕೋಚ್ ಆಗಿದ್ದರು. ಅಲ್ಲದೇ ಬಾಂಗ್ಲಾದೇಶದ ಅಂಡರ್ 19 ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ. ಅಂದಹಾಗೇ ಮಿಥುನ್ ಅವರು ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿದ 4ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ಮಿಥುನ್, ಗ್ಯಾರಿ ಕಸ್ರ್ಟನ್ ಹಾಗೂ ದೆಹಲಿ ತಂಡದ ಒಟ್ಟಿಗೆ ಆಡಿದ್ದ ಸ್ನೇಹಿತ ಆಶಿಶ್ ನೆಹ್ರಾ ಅವರೊಂದಿಗೆ ಕಾರ್ಯ ನಿರ್ವಹಿಸಲು ಉತ್ಸುಕನಾಗಿದ್ದು, ಟ್ರೋಫಿ ಗೆಲ್ಲುವತ್ತ ಹೆಚ್ಚಿನ ಗಮನಹರಿಸುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv