ಬೆಂಗಳೂರು: ಇಂದಿನಿಂದ ಜಿಯೋ ಗ್ರಾಹಕರು ಬೇರೆ ಟೆಲಿಕಾಂ ಕಂಪನಿಯ ಕರೆಗಳಿಗೆ ಕರೆ ಮಾಡಿದರೆ ಹಣವನ್ನು ಪಾವತಿಸಬೇಕಾಗುತ್ತದೆ.
ಜಿಯೋ ಬೇರೆ ಟೆಲಿಕಾಂ ಕಂಪನಿಗಳಿಗೆ ಹೊರಹೋಗುವ ಎಲ್ಲ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ವಿಧಿಸಲಾಗುವುದು ಎಂದು ಪ್ರಕಟಿಸಿದೆ. ಇಲ್ಲಿಯವರೆಗೆ ಜಿಯೋ ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್ (ಐಯುಸಿ) ವಿಧಿಸುತ್ತಿರಲಿಲ್ಲ. ಆದರೆ ಈಗ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ನಿಗದಿ ಪಡಿಸಿದಂತೆ ಐಯುಸಿ ವಿಧಿಸಲು ಜಿಯೋ ಮುಂದಾಗುತ್ತಿದೆ. ಐಯುಸಿಗಾಗಿ ಈಗ ಜಿಯೋ ಟಾಪ್ ಅಪ್ ಪ್ಲಾನ್ ಪ್ರಕಟಿಸಿದೆ.
Advertisement
ಬೇರೆ ಕಂಪನಿಗಳ ನಂಬರ್ ಗಳ ಕರೆಗಳಿಗೆ ಮಾತ್ರ ದರ ವಿಧಿಸಲಾಗಿದ್ದು ಜಿಯೋದಿಂದ ಜಿಯೋ ನಂಬರಿಗೆ ಹೋಗುವ ಕರೆಗಳು ಎಂದಿನಂತೆ ಉಚಿತವಾಗಿ ಇರಲಿದೆ. ಇದರ ಜೊತೆ ಡೇಟಾ ಬಳಸಿಕೊಂಡು ಮಾಡುವ ವಾಟ್ಸಪ್ ಕರೆ, ವಿಡಿಯೋ ಕರೆಗಳಿಗೆ ಯಾವುದೇ ದರ ಇಲ್ಲ.
Advertisement
Advertisement
ಜಿಯೋ ಈ ಹಿಂದೆ ಜಾರಿಗೆ ತಂದ ಡೇಟಾ ಪ್ಲಾನ್‍ಗಳು ಈಗಲೂ ಚಾಲ್ತಿಯಲ್ಲಿದೆ. ಈ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಉದಾಹರಣೆಗೆ ಹಿಂದೆ 449 ರೂ. ರಿಚಾರ್ಜ್ ಮಾಡಿದರೆ 91 ದಿನಗಳ ಕಾಲ ಉಚಿತವಾಗಿ ಯಾವುದೇ ಟೆಲಿಕಾಂ ಕಂಪನಿಯ ನಂಬರಿಗೆ ಕರೆ ಮಾಡಬಹುದಿತ್ತು. ಈ ಪ್ಲಾನ್ ನಲ್ಲಿ ಪ್ರತಿ ದಿನ ಗರಿಷ್ಟ 1.5 ಜಿಬಿ ಡೇಟಾ ಬಳಸಬಹುದಿತ್ತು. ಈಗಲೂ ಈ ಪ್ಲಾನ್ ಚಾಲ್ತಿಯಲ್ಲಿದೆ. ನೀವು ಜಿಯೋ ನಂಬರಿಗೆ ಮಾತ್ರ ಕರೆ ಮಾಡುತ್ತಿದ್ದರೆ ಟಾಪ್ ಅಪ್ ಹಾಕುವ ಅಗತ್ಯವಿಲ್ಲ. ಆದರೆ ಬೇರೆ ನಂಬರಿಗೆ ಕರೆ ಮಾಡಬೇಕಾದರೆ ಡೇಟಾ ಪ್ಲಾನ್ ಜೊತೆಗೆ ಟಾಪ್ ಅಪ್ ಹಾಕಬೇಕಾಗುತ್ತದೆ.
Advertisement
ಎಷ್ಟು ಟಾಪ್ ಅಪ್ ಹಾಕಬೇಕು?
ಜಿಯೋ 10 ರೂ. ನಿಂದ ಆರಂಭಿಸಿ 1000 ರೂ. ಟಾಪ್ ಅಪ್ ಪರಿಚಯಿಸಿದೆ. ಈ ಟಾಪ್ ಅಪ್‍ಗಳು ಎಲ್ಲ ಡೇಟಾ ಪ್ಲಾನ್‍ಗಳಿಗೆ ಅನ್ವಯವಾಗಲಿದೆ. ಅಂದರೆ ಒಂದೊಂದು ಡೇಟಾ ಪ್ಲಾನ್ ಗಳಿಗೆ ಪ್ರತ್ಯೇಕವಾಗಿ ಯಾವುದೇ ಟಾಪ್ ಅಪ್ ಇಲ್ಲ. 98 ರೂ.ನಿಂದ ಹಿಡಿದು 9999 ರೂ. ವರೆಗಿನ ಎಲ್ಲ ಡೇಟಾ ಪ್ಲಾನ್ ಗಳಿಗೆ ಒಂದೇ ರೀತಿಯ ಟಾಪ್ ಅಪ್ ದರ ನಿಗದಿಯಾಗಿದೆ.
ಟಾಪ್ ಅಪ್ ಹಾಕಿದ್ದಕ್ಕೆ ಹೆಚ್ಚುವರಿ ಡೇಟಾ(10 ರೂ.ಗೆ 1 ಜಿಬಿ) ನೀಡುವುದಾಗಿ ಜಿಯೋ ಹೇಳಿದೆ. ಅದಕ್ಕೂ ಬೆಲೆ ನಿಗದಿ ಪಡಿಸಿದ್ದು 10 ರೂ. ಟಾಪ್ ಅಪ್ ಹಾಕಿಸಿದರೆ 1 ಜಿಬಿ ಡೇಟಾ ಸಿಕ್ಕರೆ 1000 ರೂ. ಹಾಕಿದರೆ 100 ಜಿಬಿ ಡೇಟಾ ಸಿಗಲಿದೆ.
10 ರೂ.ಗೆ 124 ನಿಮಿಷ, 20 ರೂ. ಗೆ 249 ನಿಮಿಷ, 50 ರೂ.ಗೆ 656 ನಿಮಿಷ, 100 ರೂ.ಗೆ 1362 ನಿಮಿಷ, 500 ರೂ.ಗೆ 7,012 ನಿಮಿಷ, 1000 ರೂ.ಗೆ 14,074 ನಿಮಿಷ ಕರೆಯನ್ನು ಮಾಡಬಹುದಾಗಿದೆ.
ಈ ಹಿಂದೆ ಪ್ಲಾನ್ ಹಾಕಿದ್ರೆ ಏನು ಮಾಡಬೇಕು?
ನಿನ್ನೆಯವರೆಗೆ ಯಾರೆಲ್ಲ ಯಾವ ಡೇಟಾ ಪ್ಲಾನ್ ಹಾಕಿದ್ದೀರೋ ಅವರೆಲ್ಲ ಆ ಪ್ಲಾನ್ ನಲ್ಲಿ ಘೋಷಣೆಯಾಗಿರುವ ವ್ಯಾಲಿಡಿಟಿಯವರೆಗೆ ಯಾವುದೇ ನಂಬರಿಗೆ ಉಚಿತವಾಗಿ ಕರೆ ಮಾಡಬಹುದು. ಯಾಕೆಂದರೆ ರಿಚಾರ್ಜ್ ಮಾಡಿದ ಕೂಡಲೇ ಇಂತಿಷ್ಟು ದಿನದವರೆಗೆ ಹೊರ ಹೋಗುವ ಕರೆಗಳು ಉಚಿತ ಎಂದು ಸಂದೇಶ ಇರುವ ಮೆಸೇಜ್ ಬಂದಿರುತ್ತದೆ. ಹೀಗಾಗಿ ಆ ಗ್ರಾಹಕರು ವ್ಯಾಲಿಡಿಟಿ ಮುಗಿಯುವವರೆಗೂ ಯಾವುದೇ ಟಾಪ್ ಅಪ್ ಹಾಕುವ ಅಗತ್ಯವಿಲ್ಲ. ವ್ಯಾಲಿಡಿಟಿ ಮುಗಿದ ಬಳಿಕ ಡೇಟಾ ಪ್ಲಾನ್ ಹಾಕುವಾಗ ಪ್ರತ್ಯೇಕವಾಗಿ ಟಾಪ್ ಅಪ್ ರಿಚಾರ್ಜ್ ಮಾಡಬೇಕಾಗುತ್ತದೆ.
ಜಿಯೋ ಸೇವೆ ಆರಂಭಗೊಂಡ ಬಳಿಕ ಈ ಐಯುಸಿಯನ್ನು ತಗೆದು ಹಾಕಬೇಕೆಂದು ಟ್ರಾಯ್ ಮುಂದೆ ವಾದ ಮಂಡಿಸುತಿತ್ತು. ಆದರೆ ಬೇರೆ ಟೆಲಿಕಾಂ ಕಂಪನಿಗಳು ಐಯುಸಿಯನ್ನು ತೆಗೆದು ಹಾಕಬಾರದು ದರವನ್ನು ಹೆಚ್ಚಿಸಬೇಕು ಎಂದು ವಾದಿಸುತ್ತಿದ್ದವು. ಆದರೆ ಟ್ರಾಯ್ ಹಂತ ಹಂತವಾಗಿ ಐಯುಸಿ ದರವನ್ನು ಕಡಿತಗೊಳಿಸುತ್ತಿದ್ದು ಮುಂದಿನ ವರ್ಷದಲ್ಲಿ ಸಂಪೂರ್ಣವಾಗಿ ತೆಗೆದು ಹಾಕುವ ಸಾಧ್ಯತೆಯಿದೆ.
ಏನಿದು ಐಯುಸಿ?
ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್(ಐಯುಸಿ) ಟ್ರಾಯ್ ನಿಗದಿ ಪಡಿಸುತ್ತದೆ. ಉದಾಹರಣೆಗೆ ಜಿಯೋ ಗ್ರಾಹಕರೊಬ್ಬರು ವೊಡಾಫೋನ್ ಗ್ರಾಹಕರಿಗೆ ಕರೆ ಮಾಡಿದರೆ ಜಿಯೋ ಟ್ರಾಯ್ ನಿಗದಿ ಪಡಿಸಿದ ಐಯುಸಿಯನ್ನು ವೊಡಾಫೋನ್ ಕಂಪನಿಗೆ ಪಾವತಿಸಬೇಕಾಗುತ್ತದೆ.
2003ರಲ್ಲಿ ಒಳಬರುವ ಕರೆಯನ್ನು ಉಚಿತವಾಗಿ ನೀಡುವ ಸಲುವಾಗಿ ಟ್ರಾಯ್ ಐಯುಸಿಯನ್ನು ತಂದಿತ್ತು. 2004ರ ಫೆಬ್ರವರಿಯಲ್ಲಿ ಟ್ರಾಯ್ ಪ್ರತಿ ನಿಮಿಷಕ್ಕೆ 30 ಪೈಸೆ, 2009ರ ಏಪ್ರಿಲ್ ನಲ್ಲಿ 20 ಪೈಸೆ, 2015ರ ಮಾರ್ಚ್ ನಲ್ಲಿ 14 ಪೈಸೆ, ಪ್ರಸ್ತುತ ಈಗ 6 ಪೈಸೆ ಐಯುಸಿ ಬೆಲೆಯನ್ನು ಟ್ರಾಯ್ ನಿಗದಿಪಡಿಸಿದೆ.
ಐಯುಸಿಯಿಂದಾಗಿ ಏರ್ ಟೆಲ್, ವೊಡಾಫೋನ್ ಕಂಪನಿಗಳು ಸಾವಿರಾರು ಕೋಟಿ ರೂ. ಆದಾಯಗಳಿಸುತ್ತಿದೆ ಎನ್ನುವುದು ಜಿಯೋ ಆರೋಪ. ಕಳೆದ 3 ವರ್ಷಗಳಲ್ಲಿ ಜಿಯೋ ಐಯುಸಿಗೆಂದು ಒಟ್ಟು 12 ಸಾವಿರ ಕೋಟಿ ರೂ. ಹಣವನ್ನು ವಿವಿಧ ಟೆಲಿಕಾಂ ಕಂಪನಿಗಳಿಗೆ ಪಾವತಿಸಿದೆ. ಹೊರ ಹೋಗುವ ಕರೆಗಳು ಉಚಿತವಾಗಿ ಇರುವ ಕಾರಣ ಬೇರೆ ಕಂಪನಿಯ ಗ್ರಾಹಕರು ನಮ್ಮ ಕಂಪನಿಯ ಗ್ರಾಹಕರಿಗೆ ಮಿಸ್ ಕಾಲ್ ನೀಡುತ್ತಿದ್ದಾರೆ. ಪ್ರತಿ ದಿನ ಜಿಯೋಗೆ 25 ರಿಂದ 30 ಕೋಟಿ ಮಿಸ್ ಕಾಲ್ ಗಳು ಬರುತ್ತಿದೆ. ಇದರಿಂದಾಗಿ ನಮಗೆ ಪ್ರತಿ ದಿನ 65 ರಿಂದ 75 ಕೋಟಿ ನಷ್ಟವಾಗುತ್ತಿದೆ ಎಂದು ಜಿಯೋ ಹೇಳಿದೆ.
ಈ ಹಿಂದೆ ಭಾರತಿ ಎಂಟರ್ಪ್ರೈಸಸ್ ಮುಖ್ಯಸ್ಥ ಸುನೀಲ್ ಮಿತ್ತಲ್ ಟ್ರಾಯ್ ಮುಖ್ಯಸ್ಥರಿಗೆ ಪತ್ರ ಬರೆದು ಪ್ರಸ್ತುತ ಐಯುಸಿ ಕಡಿಮೆ ಇದೆ. ಪಾರದರ್ಶಕವಾಗಿ ಹೊಸ ಬೆಲೆಯನ್ನು ನಿಗದಿಪಡಿಸಬೇಕೆಂದು ಮನವಿ ಮಾಡಿದ್ದರು.
ಜಿಯೋ ವಿರೋಧ ಯಾಕೆ?
ಇಲ್ಲಿಯವರೆಗೆ ಟೆಲಿಕಾಂ ಕಂಪನಿಗಳು ಕರೆ ಮತ್ತು ಡೇಟಾ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸುತಿತ್ತು. ಆದರೆ ಜಿಯೋ ಈ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತದೆ. ಇದರಿಂದಾಗಿ ಖರ್ಚು ಕಡಿಮೆ ಆಗುತ್ತದೆ. ಡೇಟಾವನ್ನು ಬಳಸಿಕೊಂಡು ಕರೆ ಮಾಡುವ ತಂತ್ರಜ್ಞಾನವೇ ವಾಯ್ಸ್ ಓವರ್ ಲಾಂಗ್ ಟರ್ಮ್ ಎವಲ್ಯೂಶನ್(ಎಲ್‍ಟಿಇ). ಇದರಲ್ಲಿ ಕರೆಗೆ ಬೇರೆ, ಡೇಟಾಗೆ ಬೇರೆ ಎಂದು ಹಣ ನೀಡಬೇಕಿಲ್ಲ. ಡೇಟಾಗೆ ನೀಡಿದ ಹಣದಲ್ಲೇ ಕರೆಯನ್ನೂ ಉಚಿತವಾಗಿ ಮಾಡಬಹುದು. ಈ ಕಾರಣಕ್ಕಾಗಿ ಜಿಯೋ ಸಂಪೂರ್ಣವಾಗಿ ಐಯುಸಿಯನ್ನು ತೆಗೆದು ಹಾಕಬೇಕೆಂದು ವಾದ ಮಂಡಿಸುತ್ತಿದೆ. ಐಯುಸಿಯಿಂದ ನಮಗೆ ಹೊರೆಯಾಗುತ್ತಿದೆ. ಇತರೇ ಟೆಲಿಕಾಂ ಕಂಪೆನಿಗಳು ತಮ್ಮ ಆದಾಯವನ್ನು ಹೆಚ್ಚಿಸಲು ಮಾಡಿಕೊಂಡ ತಂತ್ರ ಎಂದು ಜಿಯೋ ವಾದಿಸುತ್ತಿದೆ.