Latest

ಜಿಯೋ ಸರ್‍ಪ್ರೈಸ್ ಆಫರನ್ನು ಟ್ರಾಯ್ ಕ್ಯಾನ್ಸಲ್ ಮಾಡಿದ್ದು ಯಾಕೆ?

Published

on

Share this

ಮುಂಬೈ: ಜಿಯೋದ ಸಮ್ಮರ್ ಸರ್‍ಪ್ರೈಸ್ ಆಫರ್ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಚೌಕಟ್ಟಿನಲ್ಲಿ ಇರದ ಕಾರಣ ಆ ಆಫರ್‍ನ್ನು ಹಿಂದಕ್ಕೆ ಪಡೆಯಲು ನಾವು ನಿರ್ದೇಶನ ನೀಡಿದ್ದೇವೆ ಎಂದು ಟ್ರಾಯ್ ಕಾರ್ಯದರ್ಶಿ ಸುಧೀರ್ ಗುಪ್ತಾ ಹೇಳಿದ್ದಾರೆ.

ಈ ವಿಚಾರವಾಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಏಪ್ರಿಲ್ 5ರಂದು ನಾವು ಜಿಯೋ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೆವು. ಈ ವೇಳೆ ಸಮ್ಮರ್ ಸರ್‍ಪ್ರೈಸ್ ಆಫರ್ ಹೇಗೆ ಟ್ರಾಯ್ ನಿಯಮದ ಅಡಿಯಲ್ಲಿ ಬರುತ್ತದೆ ಎನ್ನುವ ಪ್ರಶ್ನೆ ಕೇಳಿದ್ದೆವು. ಈ ಪ್ರಶ್ನೆಗೆ ಅವರು ಸಮರ್ಪಕ ಉತ್ತರ ನೀಡುವುಲ್ಲಿ ವಿಫಲರಾದರು. ಈ ಕಾರಣಕ್ಕಾಗಿ ನಾವು ಆಫರ್‍ನ್ನು ಹಿಂದಕ್ಕೆ ಪಡೆಯುವಂತೆ ಸೂಚಿಸಿದೆವು ಎಂದು ತಿಳಿಸಿದ್ದಾರೆ.

ಇದೇ ವೇಳೆ ಗುಪ್ತಾ ಅವರು ಹ್ಯಾಪಿ ನ್ಯೂ ಇಯರ್ ಪ್ಲಾನ್‍ನಲ್ಲಿ ಜಿಯೋ ಟ್ರಾಯ್ ನಿಯಮವನ್ನು ಉಲ್ಲಂಘನೆ ಮಾಡಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಯಾರೆಲ್ಲ ಈಗಾಗಲೇ ಜಿಯೋ ಪ್ರೈಮ್ ಮೆಂಬರ್ ಆಗಿದ್ದಾರೋ ಅವರೆಲ್ಲರೂ ಜೂನ್‍ವರೆಗೆ ಡೇಟಾ ಮತ್ತು ಉಚಿತ ಕರೆಗಳನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಿದರು.

ಸಮ್ಮರ್ ಸರ್‍ಪ್ರೈಸ್ ಆಫರ್ ಅನ್ನು ಹಿಂದಕ್ಕೆ ಪಡೆಯುವ ಮೊದಲೇ ಜಿಯೋ ಟಿವಿಯಲ್ಲಿ ಮತ್ತು ಪತ್ರಿಕೆಗಳಲ್ಲಿ ಜಾಹಿರಾತು ನೀಡಿದೆ ಅಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ, ಈ ರೀತಿಯ ಜಾಹಿರಾತು ನೀಡುವುದನ್ನು ಜಿಯೋ ನಿಲ್ಲಿಸುತ್ತದೆ ಎಂದು ನಾವು ನಂಬಿದ್ದೇವೆ ಎಂದು ಉತ್ತರಿಸಿದರು.

ಯಾವುದೇ ಟೆಲಿಕಾಂ ಕಂಪೆನಿ ಹೊಸ ಪ್ಲಾನ್ ಪ್ರಕಟಿಸಿದರೆ ಅದರ ವಿವರವನ್ನು ಒಂದು ವಾರದ ಒಳಗಡೆ ಟ್ರಾಯ್‍ಗೆ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಆದರೆ ಜಿಯೋ ಏಪ್ರಿಲ್ 7ರವರೆಗೂ ಸಮ್ಮರ್ ಸರ್‍ಪ್ರೈಸ್ ಆಫರ್ ಬಗ್ಗೆ ಯಾವುದೇ ವಿವರವನ್ನು ಸಲ್ಲಿಸಿಲ್ಲ ಎಂದು ಟ್ರಾಯ್ ತಿಳಿಸಿದೆ.

ಈ ಸಂಬಂಧ ಗುರುವಾರ ರಾತ್ರಿ ಹೇಳಿಕೆ ಬಿಡುಗಡೆ ಮಾಡಿರುವ ಜಿಯೋ, ಟ್ರಾಯ್ ಸಲಹೆಯ ಮೇರೆಗೆ ನಾವು 3 ತಿಂಗಳ ಸಮ್ಮರ್ ಸರ್‍ಪ್ರೈಸ್ ಆಫರ್ ಹಿಂದಕ್ಕೆ ಪಡೆಯುತ್ತಿದ್ದೇವೆ. ಟ್ರಾಯ್ ಸಲಹೆಗೆ ನಾವು ಬದ್ಧರಾಗಿದ್ದೇವೆ. ಆದರೆ ಯಾರೆಲ್ಲ ಸಮ್ಮರ್ ಸರ್ ಪ್ರೈಸ್ ಆಫರ್ ರಿಚಾರ್ಜ್ ಮಾಡಿದ್ದಾರೋ ಅವರು ಈ ಆಫರ್‍ನಲ್ಲೇ ಮುಂದುವರೆಯಲಿದ್ದಾರೆ ಎಂದು ತಿಳಿಸಿದೆ.

 ಆರಂಭದಲ್ಲಿ ವೆಲಕಂ ಆಫರ್ ಪ್ರಕಟಿಸಿದಾಗಲೇ ಜಿಯೋದ ಮೇಲೆ ಟ್ರಾಯ್ ನಿಮಯ ಉಲ್ಲಂಘನೆ ಆರೋಪ ಕೇಳಿ ಬಂದಿತ್ತು. ಏರ್‍ಟೆಲ್, ಐಡಿಯಾ, ವೊಡಾಫೋನ್ ಕಂಪೆನಿಗಳು ಟ್ರಾಯ್‍ಗೆ ದೂರು ನೀಡಿದ್ದವು. ಆದರೆ 90 ದಿನಗಳ ಉಚಿತ ಸೇವೆ ತನ್ನ ನಿಮಯದ ಅಡಿಯಲ್ಲೇ ಇದೆ. ಕಂಪೆನಿ ತನ್ನ ಪ್ರಚಾರಕ್ಕಾಗಿ ಈ ರೀತಿಯ ಉಚಿತ ಸೇವೆಯನ್ನು ನೀಡಲು ಅವಕಾಶವಿದೆ ಎಂದು ಹೇಳಿ ಟ್ರಾಯ್ ಟೆಲಿಕಾಂ ಕಂಪೆನಿಗಳ ಆರೋಪವನ್ನು ತಿರಸ್ಕರಿಸಿತ್ತು. ಆದರೆ ಇದಾದ ಬಳಿಕ ಜಿಯೋ ಹ್ಯಾಪಿ ನ್ಯೂ ಇಯರ್ ಪ್ಲಾನ್ ನೀಡಿತ್ತು. ಇದರಲ್ಲಿ ಒಂದು ದಿನ ಗರಿಷ್ಟ 1 ಜಿಬಿ ಡೇಟಾ ಬಳಕೆ ಮಾಡಬಹುದಾಗಿತ್ತು. ಮಾರ್ಚ್ 31ಕ್ಕೆ ಈ ಅವಧಿ ಮುಕ್ತಾಯವಾದ ಬಳಿಕ ಜಿಯೋ ಸಮ್ಮರ್ ಸರ್‍ಪ್ರೈಸ್ ಆಫರ್ ಪ್ರಕಟಿಸಿತ್ತು.

ಏನಿದು ಸಮ್ಮರ್ ಸರ್‍ಪ್ರೈಸ್ ಆಫರ್?
ಜಿಯೋ ಸಮ್ಮರ್ ಆಫರ್ ನಿಮಗೆ ಬೇಕಾದ್ರೆ ಮೊದಲು ನೀವು ಜಿಯೋದ ಯಾವ ಗ್ರಾಹಕರ ವಿಭಾಗದಲ್ಲಿ ಇದ್ದೀರಿ ಎನ್ನುವುದನ್ನು ತಿಳಿದುಕೊಳ್ಳಬೇಕು. ಜಿಯೋದಲ್ಲಿ ಸದ್ಯಕ್ಕೆ ಎರಡು ವರ್ಗದ ಗ್ರಾಹಕರಿದ್ದಾರೆ. ಒಂದನೇಯ ಗ್ರಾಹಕರು 99 ರೂ. ನೀಡಿ ಪ್ರೈಮ್ ಸದಸ್ಯರಾದವರು. 99 ರೂ. ನೀಡದೇ ಈಗಲೂ ಜಿಯೋ ಸೇವೆಯನ್ನು ಬಳಸುತ್ತಿರುವವರು ಎರಡನೇ ವರ್ಗದ ಗ್ರಾಹಕರು. ಹೀಗಾಗಿ ಜಿಯೋ ಸಮ್ಮರ್ ಆಫರ್ ಲಾಭ ನಿಮಗೆ ಬೇಕಿದ್ದಲ್ಲಿ ಮೊದಲು ನೀವು 99 ರೂ. ನೀಡಿ ಜಿಯೋ ಪ್ರೈಮ್ ಸದಸ್ಯರಾಗಬೇಕಾಗುತ್ತದೆ.

ಈ ಆಫರ್ ಲಾಭ ಸಿಗಬೇಕಿದ್ದರೆ 303 ರೂ. ಮತ್ತು ಅದಕ್ಕಿಂತ ಹೆಚ್ಚಿನ ರಿಚಾರ್ಜ್ ಮಾಡಬೇಕಾಗಿತ್ತು. ಈ ರಿಚಾರ್ಜ್ ಮಾಡಿದ್ದರೆ ಯಾವ ಪ್ಯಾಕ್ ಹಾಕಿದ್ದೀರೋ ಆ ಪ್ಯಾಕ್‍ನ ಆಫರ್ ಮತ್ತೆ ಮೂರು ತಿಂಗಳು ವಿಸ್ತರಣೆಯಾಗುತಿತ್ತು. ಇದರ ಅರ್ಥ ನೀವು 303 ರೂಪಾಯಿ ಪ್ಯಾಕ್ ಹಾಕಿದ್ರೆ ಅದರಲ್ಲಿ ಪ್ರತಿ ದಿನ ನಿಮಗೆ ಗರಿಷ್ಠ ಒಂದು ಜಿಬಿ ಡೇಟಾದ ಜೊತೆ ಹೊರ ಹೋಗುವ ಎಲ್ಲ ಕರೆಗಳು ಮತ್ತು ಮೆಸೇಜ್ ಉಚಿತವಾಗಿ ಸಿಗುತಿತ್ತು. ಆದರೆ ಈ ಆಫರ್ ವ್ಯಾಲಿಡಿಟಿ 28 ದಿನಗಳು ಮಾತ್ರ ಇತ್ತು. ಆದರೆ ಈ ಸಮ್ಮರ್ ಸರ್‍ಪೈಸ್ ಆಫರ್‍ನಲ್ಲಿ ಈ ವ್ಯಾಲಿಡಿಟಿ ಅವಧಿ ಜೂನ್ 30ರವರೆಗೆ ವಿಸ್ತರಣೆಯಾಗಿತ್ತು.

ಇದನ್ನೂ ಓದಿ: ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?

Click to comment

Leave a Reply

Your email address will not be published. Required fields are marked *

Advertisement
Advertisement