Connect with us

Latest

ಫೇಸ್‍ಬುಕ್ ಜಿಯೋ ಷೇರು ಖರೀದಿಸಿದ್ದು ಯಾಕೆ? ಕಂಪನಿಗಳಿಗೆ ಲಾಭ ಏನು? -ಇಲ್ಲಿದೆ ಪೂರ್ಣ ವಿವರ

Published

on

ಮುಂಬೈ: ಕಡಿಮೆ ಬೆಲೆಯಲ್ಲಿ ಡೇಟಾ ನೀಡಿ ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ಜಿಯೋ ಕಂಪನಿಯನ್ನು ಷೇರುಗಳನ್ನು ಫೇಸ್ ಬುಕ್ ಖರೀದಿಸಿದೆ. ಕೊರೊನಾ ವೈರಸ್ ಸಮಯದಲ್ಲಿ ವಿಶ್ವದ ಆರ್ಥಿಕತೆ ಮುಗ್ಗರಿಸುತ್ತಿರುವ ಮಧ್ಯೆ ಶತಕೋಟಿ ಡಾಲರ್ ಒಪ್ಪಂದ ಭಾರತದ ಪಾಲಿಗೆ ಶುಭ ಸುದ್ದಿಯಾಗಿದೆ. ಫೇಸ್‍ಬುಕ್ ಯಾಕೆ ಷೇರು ಖರೀದಿಸಿದ್ದು? ಜಿಯೋಗೆ ಏನು ಲಾಭ ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಒಪ್ಪಂದದ ಮೌಲ್ಯ ಎಷ್ಟು?
ಈ ಹಿಂದೆಯೇ ಫೇಸ್‍ಬುಕ್ ಕಂಪನಿ ಜಿಯೋ ಕಂಪನಿಯಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿದೆ ಎಂಬ ವರದಿ ಬಂದಿತ್ತು. ಆದರೆ ಎರಡು ಕಂಪನಿಗಳ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಈಗ ಎರಡು ಕಂಪನಿಗಳು ಅಧಿಕೃತವಾಗಿ ಈ ಸುದ್ದಿಯನ್ನು ಪ್ರಕಟಿಸಿದ್ದು ಶೇ.9.9 ಷೇರುಗಳನ್ನು 43,574 ಕೋಟಿ ರೂ. ನೀಡಿ ಖರೀದಿಸಿದೆ. ಈ ಮೂಲಕ ಜಿಯೋ ಕಂಪನಿಯ ಮೌಲ್ಯ 4.62 ಲಕ್ಷ ಕೋಟಿಗೆ ತಲುಪಿದೆ.

ಯಾವ ಕಂಪನಿಯ ಸಾಮರ್ಥ್ಯ ಏನು?
ಜಿಯೋ ಭಾರತದ ಅತಿ ದೊಡ್ಡ ಟೆಲಿಕಾಂ ನೆಟ್‍ವರ್ಕ್ ಆಗಿದ್ದು 38 ಕೋಟಿ ಜನ ಬಳಕೆ ಮಾಡುತ್ತಿದ್ದಾರೆ. ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲತಾಣ ಕಂಪನಿಯಾದ ಫೇಸ್‍ಬುಕ್ ಗೆ ಪ್ರತಿ ತಿಂಗಳು 2.50 ಶತಕೋಟಿ ಸಕ್ರೀಯ ಬಳಕೆದಾರಿದ್ದಾರೆ.

ಜಿಯೋ, ಫೇಸ್‍ಬುಕ್ ಗೆ ಏನು ಲಾಭ?
ಯಾವುದೇ ಕಂಪನಿ ಇನ್ನೊಂದು ಕಂಪನಿಯಲ್ಲಿ ಲಾಭ ಇಲ್ಲದೇ ಹಣವನ್ನು ಹೂಡಿಕೆ ಮಾಡುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಮುಕೇಶ್ ಅಂಬಾನಿ ಡಿಜಿಟಲ್ ಜಗತ್ತಿನಲ್ಲಿ ಹೆಚ್ಚು ಹಣವನ್ನು ಹೂಡಿಕೆ ಮಾಡಲಾಗುವುದು ಎಂದು 2019ರ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆಯಲ್ಲಿ ಷೇರುದಾರರಿಗೆ ತಿಳಿಸಿದ್ದರು. ಅದರಂತೆ ಜಿಯೋ ಮಾರ್ಟ್ ಆರಂಭಿಸಿದ್ದರು.

ತನ್ನ ಇ-ಕಾಮರ್ಸ್ ಕಾರ್ಯಾಚರಣೆಯನ್ನು ಪ್ರಾರಂಭಿಸಲು ರಿಲಯನ್ಸ್ ರಿಟೇಲ್ ಜಿಯೋಮಾರ್ಟ್‍ಗಾಗಿ ಪೂರ್ವ ನೋಂದಣಿಗಳಿಗೆ ಆಹ್ವಾನಿಸಿತ್ತು. ಈ ಹೊಸ ಉದ್ಯಮವು 50 ಸಾವಿರಕ್ಕೂ ಹೆಚ್ಚು ಕಿರಾಣಿ ಉತ್ಪನ್ನಗಳಿಗೆ ಬಂಡವಾಳ ನೀಡಲು ಅವಕಾಶ ಮಾಡಿಕೊಟ್ಟಿದೆ. ಕಡಿಮೆ ಬೆಲೆ ಮತ್ತು ಉಚಿತ ಡೆಲಿವರಿಗೆ ಹೆಚ್ಚು ಆದ್ಯತೆ ನೀಡಿದ್ದು ಉತ್ಪನ್ನಗಳು ವಾಪಸ್ ಆಗದ ರೀತಿಯಲ್ಲಿ ಎಕ್ಸ್ ಪ್ರೆಸ್ ಡೆಲಿವರಿ ಸೇವೆಯನ್ನ ಗ್ರಾಹಕರಿಗೆ ಒದಗಿಸಲಿದೆ. ಇದಕ್ಕಾಗಿ ಜಿಯೋ ಮಾರ್ಟ್ “ದೇಶ್ ಕೀ ನಾಯ್ ದುಕಾನ್” (ದೇಶದ ಹೊಸ ಅಂಗಡಿ) ಸಬ್ ಟೈಟಲ್ ನ್ನು ನೀಡಿದ್ದು ಅಮೇಜಾನ್ ಫ್ಲಿಪ್‍ಕಾರ್ಟ್ ನಂತೆ ತನ್ನತ್ತ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಪ್ರಾಯೋಗಿಕವಾಗಿ ಹೊಸ ಮುಂಬೈ, ಥಾಣೆ ಮತ್ತು ಕಲ್ಯಾಣ್‍ನಲ್ಲಿ ಜಿಯೋಮಾರ್ಟ್ ಆರಂಭಿಸಿತ್ತು.

ಕಿರಾಣಿ ಅಂಗಡಿ ಮಾರುಕಟ್ಟೆಯನ್ನು ವಾಟ್ಸಪ್ ಮೂಲಕ ತಲುಪಲು ಜಿಯೋ ಮತ್ತು ವಾಟ್ಸಪ್ ಮುಂದಾಗುತ್ತಿದೆ. ಈ ನಿಟ್ಟಿನಲ್ಲಿ ವಾಟ್ಸಪ್ ಮೂಲಕವೂ ಆದಾಯ ತರಲು ಫೇಸ್‍ಬುಕ್ ಸಿದ್ಧತೆ ನಡೆಸುತ್ತಿದೆ.

ಭಾರತವೇ ಯಾಕೆ?
ವಿಶ್ವದ ಎರಡನೇ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಜಿಯೋ ಪ್ರವೇಶದ ಬಳಿಕ ಇಂಟರ್ ನೆಟ್ ಬಳಕೆ ಹೆಚ್ಚಾಗಿದೆ. ಚೀನಾದಲ್ಲಿ ಫೇಸ್‍ಬುಕ್, ಗೂಗಲ್ ಕಂಪನಿಗಳ ಉತ್ಪನ್ನಗಳಿಗೆ ನಿಷೇಧವಿದ್ದು ಈಗ ವಿಶ್ವದಲ್ಲೇ ಭಾರತ ಅತಿ ದೊಡ್ಡ ಡಿಜಿಟಲ್ ಮಾರುಕಟ್ಟೆಯಾಗಿದೆ. ಭಾರತದಲ್ಲಿ ತಿಂಗಳಿಗೆ ಫೇಸ್‍ಬುಕ್ ಗೆ 32.8 ಕೋಟಿ ಸಕ್ರೀಯ ಬಳಕೆದಾರರಿದ್ದು, ವಾಟ್ಸಪ್ 40 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಹೀಗಾಗಿ ವಿಶ್ವದ ಹಲವು ಕಂಪನಿಗಳು ಭಾರತದ ಉದ್ಯಮಗಳ ಮೇಲೆ ಬಂಡವಾಳ ಹೂಡಲು ಆಸಕ್ತಿ ವಹಿಸಿದೆ. ಇದನ್ನೂ ಓದಿ: ಚೀನಾದ ಕುತಂತ್ರ ಬುದ್ಧಿಗೆ ಫುಲ್‍ಸ್ಟಾಪ್ ಇಟ್ಟ ಭಾರತ

ವಾಟ್ಸಪ್ ಮೂಲಕ ಆದಾಯ:
ಯಾವುದೇ ಕಾರಣಕ್ಕೂ ಜಾಹೀರಾತು ಪ್ರಕಟಿಸುವುದಿಲ್ಲ ಎಂದು ವಾಟ್ಸಪ್ ಹೇಳಿಕೊಂಡಿದೆ. ಇನ್ ಸ್ಟಾ ಸ್ಟೇಟಸ್ ನಲ್ಲಿ ಹೇಗೆ ಜಾಹೀರಾತುಗಳು ಬರುತ್ತದೋ ಅದೇ ರೀತಿಯಾಗಿ ವಾಟ್ಸಪ್ ಸ್ಟೇಟಸ್ ನಲ್ಲೂ ಜಾಹೀರಾತು ಪ್ರಕಟ ಮಾಡಲು ಫೇಸ್‍ಬುಕ್ ಮುಂದಾಗುತ್ತಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಇದು ಜಾರಿಯಾಗಿರಲಿಲ್ಲ. ಈ ನಡುವೆ ವಾಟ್ಸಪ್ ಬಿಸಿನೆಸ್ ಅಕೌಂಟ್ ತರುವ ಮೂಲಕ ಮೊದಲ ಬಾರಿಗೆ ಆದಾಯದತ್ತ ದೃಷ್ಟಿ ಹಾಕಿತು.

ಈ ಮಧ್ಯೆ ಗೂಗಲ್ ಪೇ, ಫೋನ್ ಪೇ ರೀತಿ ಹಣ ಕಳುಹಿಸಲು ವಾಟ್ಸಪ್ ಸಿದ್ಧತೆ ನಡೆಸಿ ಪ್ರಯೋಗಿಕ ಪರೀಕ್ಷೆ ಸಹ ನಡೆಸಿತ್ತು. ಆದರೆ ಖಾಸಗಿತನ ವಿಚಾರದಲ್ಲಿ ಕೆಲ ಪ್ರಶ್ನೆಗಳು ಎದ್ದ ಪರಿಣಾಮ ಇದು ಜಾರಿಯಾಗಿರಲಿಲ್ಲ. ಈಗ ವಾಟ್ಸಪ್ ಅನ್ನು ವೇದಿಕೆಯನ್ನಾಗಿಸಿಕೊಂಡು ಜಿಯೋ ಮಾರ್ಟ್ ವ್ಯವಹಾರವನ್ನು ಉತ್ತೇಜಿಸಿ ಆದಾಯಗಳಿಸಲು ಫೇಸ್‍ಬುಕ್ ಮುಂದಾಗಿದೆ.


ಜಿಯೋಮಾರ್ಟ್ ವಿಶೇಷತೆ ಏನು?
ಜಿಯೋ ಮಾರ್ಟ್ ಉಗ್ರಾಣವನ್ನು ನಿರ್ಮಿಸುವ ಬದಲು, “ಆನ್‍ಲೈನ್- ಟು – ಆಫ್‍ಲೈನ್” ಮಾರುಕಟ್ಟೆ ನಿರ್ಮಿಸುತ್ತಿದೆ. ಅಮೆಜಾನ್ ಪ್ರೈಮ್ ನೌ ಮತ್ತು ಗ್ರೂಫರ್ಸ್‍ನಂತೆಯೇ ಕಿರಾಣಿ ವಸ್ತುಗಳನ್ನು ಹತ್ತಿರದ ವ್ಯಾಪಾರಿಗಳಿಂದ ಪಡೆದು ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡಲಿದೆ. ಇದರಿಂದ ಜಿಯೋ ಮಾರ್ಟ್ ಹೊಸ ಉದ್ಯಮವು ಆಫ್‍ಲೈನ್ ಚಿಲ್ಲರೆ ವ್ಯಾಪಾರಿಗಳಿಗೆ ತಮ್ಮ ಪ್ರದೇಶದಲ್ಲಿನ ಆನ್‍ಲೈನ್ ಕೇಂದ್ರೀಕೃತ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಪೂರೈಸುವ ವೇದಿಕೆಯಾಗಿ ಹೊರ ಹೊಮ್ಮುವ ಸಾಧ್ಯತೆಯಿದೆ.

ಆರಂಭದಲ್ಲಿ, ಜಿಯೋಮಾರ್ಟ್, ದೈನಂದಿನ ಅವಶ್ಯಕತೆಗಳಾದ ಸಾಬೂನು, ಶ್ಯಾಂಪೂ ಮತ್ತು ಇತರ ಮನೆ ಬಳಕೆಯ ವಸ್ತುಗಳನ್ನು ಕೇವಲ ಎರಡು ಗಂಟೆಯಲ್ಲಿ ಪೂರೈಕೆ ಮಾಡಲಿದೆ ಎಂದು ಹೇಳಿಕೊಂಡಿದೆ.

ಭಾರತಕ್ಕೆ ಏನು ಲಾಭ?
2019-20ರ ಹಣಕಾಸು ವರ್ಷದಲ್ಲಿ ಭಾರತ ಮತ್ತು ಚೀನಾ ಮಾತ್ರ ಧನಾತ್ಮಕ ಜಿಡಿಪಿ ಬೆಳವಣಿಗೆ ಸಾಧಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಭವಿಷ್ಯ ನುಡಿದಿದೆ. ಈ ನಿಟ್ಟಿನಲ್ಲಿ ವಿಶ್ವದ ಹಲವು ರಾಷ್ಟ್ರಗಳು ಚೀನಾದ ಅವಲಂಬನೆ ಕಡಿಮೆ ಮಾಡಿ ಭಾರತದಲ್ಲಿ ಹೂಡಿಕೆ ಮಾಡಲು ಮುದಾಗುತ್ತಿದೆ. ಇದರಿಂದಾಗಿ ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ವಿಶ್ವದ ಹಲವು ಷೇರು ಮಾರುಕಟ್ಟೆಗಳು ಭಾರೀ ಕುಸಿತ ಕಂಡರೂ ಭಾರತದ ಮಾರುಕಟ್ಟೆ ಕುಸಿತ ಕಂಡು ಮತ್ತೆ ನಿಧಾನವಾಗಿ ಏಳುತ್ತಿದೆ. ಶತಕೋಟಿ ಜನಸಂಖ್ಯೆ ಇದ್ದರೂ ಕೊರೊನಾ ನಿಯಂತ್ರಣ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೇ ಶ್ಲಾಘಿಸಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು 100ಕ್ಕೂ ಅಧಿಕ ದೇಶಗಳಿಗೆ ಭಾರತ ರಫ್ತು ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ವಿದೇಶಿ ಕಂಪನಿಗಳನ್ನು ಸೆಳೆಯಲು ಮುಂದಾಗುತ್ತಿದೆ.

ಸೌದಿ ಕಂಪನಿಯ ಜೊತೆ ಸಹಿ ಹಾಕಿತ್ತು:
ರಿಲಯನ್ಸ್ ಇಂಡಸ್ಟ್ರೀಸ್ ಜಿಯೋದ ಮಾತೃ ಸಂಸ್ಥೆಯಾಗಿದ್ದು ಹಲವು ಸಾಲಗಳನ್ನು ಮಾಡಿದ್ದು ಈಗ ಸಾಲದ ಹೊರೆ ಕಡಿಮೆಯಾಗಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ವಿದೇಶಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳುವುದು ಇದು ಮೊದಲೆನಲ್ಲ. ಈ ಹಿಂದೆ ತೈಲ ಕ್ಷೇತ್ರ ಜಾಗತಿಕ ಕಂಪನಿ ಸೌದಿ ಅರಾಮ್ಕೋಗೆ ರಿಲಯನ್ಸ್ ಆಯಿಲ್ ಟು ಕೆಮಿಕಲ್ಸ್(ಒಟಿಸಿ) ಕಂಪನಿ ತನ್ನ ಶೇ.20 ರಷ್ಟು ಪಾಲನ್ನು ಮಾರಾಟ ಮಾಡಲು ಸಮ್ಮತಿ ಸೂಚಿಸಿತ್ತು. ಒಟ್ಟು 75 ಶತಕೋಟಿ ಡಾಲರ್(5.3 ಲಕ್ಷ ಕೋಟಿ ರೂ.) ಒಪ್ಪಂದಕ್ಕೆ ರಿಲಯನ್ಸ್ ಸಹಿ ಹಾಕುವುದಾಗಿ ತಿಳಿಸಿತ್ತು. ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ರಿಲಯನ್ಸ್ – ಒಂದು ಒಪ್ಪಂದ, ಒಂದು ಹೇಳಿಕೆಯಿಂದ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ.ಗೆ ಏರಿಕೆ

Click to comment

Leave a Reply

Your email address will not be published. Required fields are marked *