ಬೀಜಿಂಗ್: ಯುವ ಮನಸ್ಸುಗಳ ನಡುವೆ ಪ್ರೇಮಾಂಕುರ ಆಗುವುದು ಸಹಜ. ಆ ಪ್ರೀತಿ ಕೇವಲ ಆಕರ್ಷಣೆ ಆಗಿದ್ರೆ ಅದು ಕೆಲವೇ ದಿನಗಳಲ್ಲಿ ಮುರಿದು ಬೀಳುತ್ತಿದೆ. ಇನ್ನು ಕೆಲವೊಂದು ಪ್ರೇಮ ಕಥೆಗಳು ಯಶಸ್ವಿಯಾಗಿ ಇತಿಹಾಸದ ಪುಟಗಳನ್ನು ಸೇರುತ್ತವೆ. ಬ್ರೇಕಪ್ ಬಳಿಕ ಯುವಕನೊಬ್ಬ ಆತನ ಗೆಳತಿಯಿಂದ ಪಾರಾಗಿರುವ ವಿಚಿತ್ರ ಘಟನೆಯೊಂದು ಚೀನಾದಲ್ಲಿ ನಡೆದಿದೆ.
ಚೀನಾದ ಅನ್ಹುಯಿ ಪ್ರಾಂತ್ಯದ ಕ್ವಿನ್ಸ್ಹಾನ್ ಎಂಬಲ್ಲಿ ಮೇ 20ರಂದು ಈ ಘಟನೆ ನಡೆದಿದೆ. 23 ವರ್ಷದ ಯುವಕನೋರ್ವ 26 ವರ್ಷದ ಯುವತಿ ಜೊತೆ ರಿಲೇಶನ್ ಶಿಪ್ ನಲ್ಲಿದ್ರು. ಮೇ 20ರಂದು ಯುವಕ ಬ್ರೇಕಪ್ ಮಾಡಿಕೊಳ್ಳೋಣ ಅಂದಿದ್ದಾನೆ. ಯುವಕನ ಮಾತನ್ನು ಒಪ್ಪಿಕೊಂಡು ಯುವತಿ ಕೊನೆಯದಾಗಿ ಬ್ರೇಕಪ್ ಕಿಸ್ (ಲಿಪ್ ಟು ಲಿಪ್) ಕೊಡ್ಲಾ ಅಂತಾ ಕೇಳಿಕೊಂಡಿದ್ದಾಳೆ.
ಯುವಕ ಮಾಜಿ ಗೆಳೆತಿಯ ಮಾತಿಗೆ ಬದ್ಧನಾಗಿ ಕಿಸ್ ಕೊಡಲು ಮುಂದಾಗಿದ್ದ. ಯುವತಿ ಕಿಸ್ ಕೊಡುವಾಗ ಯುವಕನ ನಾಲಗೆಯನ್ನು ಕಚ್ಚಲು ಆರಂಭಿಸಿದ್ದಾಳೆ. ಯುವತಿ ನಾಲಗೆ ಕಚ್ಚುತ್ತಿದ್ದಂತೆ ಭಯಬೀತನಾದ ಯುವಕ ಆಕೆಯನ್ನು ದೂರ ತಳ್ಳಲು ಪ್ರಯತ್ನಿಸಿದ್ದಾನೆ. ಆದ್ರೂ ಯುವತಿ ಆತನನ್ನು ಗಟ್ಟಿಯಾಗಿ ತಬ್ಬಿಕೊಂಡು ನಾಲಗೆಯನ್ನು ತನ್ನ ಹಲ್ಲಿನಿಂದ ಕಚ್ಚಲು ಪ್ರಯತ್ನಿಸಿದ್ದಾಳೆ.
ಪೆಪ್ಪರ್ ಸ್ಪ್ರೇ ಬಳಕೆ: ಜನ ನಿಬಿಡ ರಸ್ತೆಯ ಬದಿಯಲ್ಲಿ ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಸೇರಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಯುವಕ ಮತ್ತು ಯುವತಿಯನ್ನು ಬೇರ್ಪಡಿಸಲು ಪ್ರಯತ್ನಿಸಿದ್ದಾರೆ. ಯುವಕನನ್ನು ತಬ್ಬಿಕೊಂಡ ಯುವತಿ ಆತನನ್ನು ಬಿಡುತ್ತಿರಲಿಲ್ಲ. ಕೊನೆಗೆ ಪೊಲೀಸರು ಯುವತಿಯ ಮುಖಕ್ಕೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ಇಬ್ಬರನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಸಣ್ಣ ಪ್ರಮಾಣದ ಗಾಯಗಳಾಗಿವೆ. ಇನ್ನು ಯುವಕನನ್ನು ಲಿಯು ಮತ್ತು ಯುವತಿಯನ್ನು ಝ್ಹೌ ಎಂದು ಗುರುತಿಸಲಾಗಿದೆ. ಘಟನೆಯ ಬಳಿಕ ಯುವತಿಯನ್ನು ಆಕೆಯ ಪೋಷಕರ ವಶಕ್ಕೆ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿ ವು ಚಾಂಗ್‍ಫೆಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೆಲವು ವರ್ಷಗಳಿಂದ ಝ್ಹೌ ಮತ್ತು ಲಿಯು ಇಬ್ಬರೂ ಪ್ರೀತಿಯಲ್ಲಿದ್ರು. ನಮ್ಮ ಮಗಳು ಕೆಲ ದಿನಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಕಿತ್ಸೆ 5 ವರ್ಷಗಳವರಗೆ ನಡೆಯಬೇಕಿದ್ದು, ನಂತರ ಆಕೆ ಗುಣಮುಖವಾಗಲಿದ್ದಾಳೆ ಎಂದು ಯುವತಿ ಪೋಷಕರು ತಿಳಿಸಿದ್ದಾರೆ.