ರಾಂಚಿ: ವ್ಯಕ್ತಿಯೊಬ್ಬರ ಮನೆಯ ಮುಂದೆ ಹಸು ಸತ್ತಿರುವುದನ್ನು ನೋಡಿ ಸಿಟ್ಟಾದ ಸಾರ್ವಜನಿಕರು ಆ ವ್ಯಕ್ತಿಯನ್ನು ಹಿಡಿದು ಚೆನ್ನಾಗಿ ಥಳಿಸಿ ಬಳಿಕ ಮನೆಗೆ ಬೆಂಕಿ ಹಚ್ಚಿದ ಘಟನೆ ಜಾರ್ಖಂಡ್‍ನ ಗಿರಿದಿಹ್ ಜಿಲ್ಲೆಯ ಡಿಯೋರಿ ಪ್ರದೇಶದಲ್ಲಿರೋ ಬೆರಿಯಾ ಹತಿಯಾಂಡ್ ಎಂಬ ಗ್ರಾಮದಲ್ಲಿ ನಡೆದಿದೆ.
ಈ ಘಟನೆ ಮಂಗಳವಾರ ನಡೆದಿದೆ. ಉಸ್ಮಾನ್ ಅನ್ಸಾರಿ ಎಂಬವರ ಮನೆಯ ಮುಂದೆ ಹಸುವೊಂದು ಸತ್ತು ಬಿದ್ದಿತ್ತು. ಇದರಿಂದ ಕೆಂಡಾಮಂಡಲರಾದ ಸುಮಾರು 200 ಮಂದಿ ಸಾರ್ವಜನಿಕರು ಅನ್ಸಾರಿಯನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಅಲ್ಲದೇ ಮನೆಗೆ ಕಲ್ಲು ತೂರಾಟ ಮಾಡಿ, ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಅಂತಾ ಜಾರ್ಖಂಡ್ ಪೊಲಿಸ್ ವಕ್ತಾರ ಹಾಗೂ ಎಡಿಜಿ ಆರ್ ಕೆ ಮುಲ್ಲಿಕ್ ತಿಳಿಸಿದ್ದಾರೆ.
ಘಟನೆಯ ಕುರಿತು ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಅನ್ಸಾರಿ ಹಾಗೂ ಕುಟುಂಬದವರನ್ನು ರಕ್ಷಿಸಿ, ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅನ್ಸಾರಿ ಚೇತರಿಸಿಕೊಳ್ಳುತ್ತಿದ್ದಾರೆ ಅಂತಾ ವರದಿಯಾಗಿದೆ.
ಸಾರ್ವಜನಿಕರ ಕಲ್ಲು ತೂರಾಟದಿಂದ ಸುಮಾರು 50 ಪೊಲೀಸರಿಗೆ ಗಾಯಗಳಾಗಿವೆ. ಅಲ್ಲದೇ ಈ ವೇಳೆ ಗಲಭೆ ನಿಯಂತ್ರಣಕ್ಕಾಗಿ ಪೊಲೀಸರು ಗುಂಡು ಹಾರಿಸಿದ್ದು, ಪರಿಣಾಮ ಓರ್ವ ಪೊಲೀಸ್ ಪೇದೆ ಕೂಡ ಗಾಯಗೊಂಡಿದ್ದಾರೆ ಅಂತಾ ಎಡಿಜಿ ಆಂಗ್ಲ ಪತ್ರಿಕೆಯೊಂದಕ್ಕೆ ವಿವರಿಸಿದ್ದಾರೆ.
ಪ್ರಕರಣ ಸಂಬಂಧ ಇದುವರೆಗೂ ಯಾರನ್ನು ಬಂಧಿಸಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಹರಿಯಾಣದಲ್ಲಿ ದನದ ಮಾಂಸ ತೆಗೆದುಕೊಂಡು ಹೋಗುತ್ತಿದ್ದಾನೆ ಎಂದು ಆರೋಪಿಸಿ ರೈಲಿನಲ್ಲೇ 16 ವರ್ಷದ ಹುಡುಗನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದರು.