ಮಕ್ಕಳ ಎದುರೇ ಬಿಜೆಪಿ ನಾಯಕ, ಪತ್ನಿಯ ಗುಂಡಿಕ್ಕಿ ಹತ್ಯೆ

Public TV
2 Min Read
BJP SULLAI 1

ರಾಂಚಿ: ಮಕ್ಕಳ ಎದುರೇ ಬಿಜೆಪಿ ನಾಯಕ ಹಾಗೂ ಅವರ ಪತ್ನಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಅಮಾನವೀಯ ಘಟನೆಯೊಂದು ಜಾರ್ಖಂಡ್ ನ ಮಾವೋವಾದಿಗಳ ಪ್ರಾಬಲ್ಯವಿರುವ ಖುಂಟಿ ಜಿಲ್ಲೆಯಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಶೀತಲ್ ಮುಂಡಾ ಎಂದು ಗುರುತಿಸಲಾಗಿದ್ದು, ಇವರು ಕುಪುರ್ತಿ ಪಂಚಾಯ್ತಿಯ ಬೂತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪತ್ನಿ ಮಾಡೆ ಹಸ್ಸಾರನ್ನು ಕೂಡ ಹತ್ಯೆ ಮಾಡಲಾಗಿದೆ.

ಜಾರ್ಖಂಡ್ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಇದು 2ನೇ ಹತ್ಯೆಯಾಗಿದೆ. ಇದಕ್ಕೂ ಮೊದಲು ಕಾರ್ಯಕ್ರಮವೊಂದರಲ್ಲಿ ಸ್ಥಳೀಯ ಬಿಜೆಪಿ ನಾಯಕ ಮಾಘೋ ಮುಂಡು, ಪತ್ನಿ ಹಾಗೂ ಮಗನನ್ನು ಕೊಲೆ ಮಾಡಲಾಗಿತ್ತು.

vote a

ಶೀತಲ್ ಮುಂಡಾ ಹತ್ಯೆ ಶುಕ್ರವಾರ ಸಂಜೆ ನಡೆದಿದ್ದು, ಶನಿವಾರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದಂಪತಿ ತನ್ನಿಬ್ಬರು ಮಕ್ಕಳೊಂದಿಗೆ ಇರುವಾಗಲೇ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಪರಿಣಾಮ ಮುಂಡಾ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒರ್ವ ಮಗನನ್ನು ಅಗಲಿದ್ದಾರೆ.

ಘಟನೆ ಸಂಬಂಧ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ತನಿಖೆಯ ವೇಳೆ ಇದೂವರೆಗೂ ಮಾವೋವಾದಿಗಳ ಕೈವಾಡ ಇರುವುದು ಬೆಳಕಿಗೆ ಬಂದಿಲ್ಲ. ಹೀಗಾಗಿ ವಾಸ್ತವಾಂಶ ಏನು ಎಂಬುದನ್ನು ಈಗಾಗಲೇ ತಿಳಿಯಲು ಸಾಧ್ಯವಿಲ್ಲ. ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡಗಳನ್ನು ಕೂಡ ನೇಮಿಸಲಾಗಿದ್ದು, ತನಿಖೆ ಮುಂದುವರಿದೆ ಎಂದು ಪೊಲೀಸ್ ಅಧೀಕ್ಷಕ ಅಶುತೋಷ್ ಶೇಖರ್ ತಿಳಿಸಿದ್ದಾರೆ.

ಮಕ್ಕಳು ಹೇಳಿದ್ದೇನು?
ಜೀನ್ಸ್, ಟೀ-ಶರ್ಟ್ ಧರಿಸಿದ್ದ ಮೂವರು ದುಷ್ಕರ್ಮಿಗಳು ಏಕಾಏಕಿ ಮನೆಯೊಳಗೆ ನುಗ್ಗಿದರು. ಅಲ್ಲದೆ ತಂದೆಯ ಬಳಿ ಹಣ ನೀಡುವಂತೆ ಕೇಳಿದರು. ಆದರೆ ತಂದೆ ಅವರಿಗೆ ಹಣ ನೀಡಲು ನಿರಾಕರಿಸಿದರು. ಪರಿಣಾಮ ಅವರು ತಂದೆಗೆ ಗುಂಡಿಕ್ಕಿದ್ದಾರೆ. ಇದರಿಂದ ಬೆದರಿದ ತಾಯಿ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು. ಈ ವೇಳೆ ಅವರ ಮೇಲೂ ಅಪರಿಚಿತರು ಗುಂಡು ಹಾರಿಸಿದರು ಎಂದು ಮೃತರ ಮಕ್ಕಳು ಪೊಲೀಸರ ಬಳಿ ಹೇಳಿದ್ದಾರೆ.

Police Jeep

ಮೃತರ ಮರಣೋತ್ತರ ಪರೀಕ್ಷೆಯ ವೇಳೆ ಕೇಂದ್ರ ಸಚಿವರು, ಬಿಜೆಪಿ ನಾಯಕರು ಹಾಗೂ ನಗರಾಭಿವೃದ್ಧಿ ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಕೇಂದ್ರ ಸಚಿವ ಅರ್ಜುನ್ ಮುಂಡಾ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೆ ಪ್ರಕರಣ ಸಂಬಂಧ ಕೂಡಲೇ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಒತ್ತಾಯಿಸಿದರು.

Share This Article