Connect with us

Latest

ಬಿಜೆಪಿಗೆ ಸೋಲು – ಜಾರ್ಖಂಡಿನಲ್ಲಿ ಕಾಂಗ್ರೆಸ್ ಮೈತ್ರಿಗೆ ಗೆಲುವು

Published

on

ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಮಹಾರಾಷ್ಟ್ರ ಬಳಿಕ ಆಡಳಿತ ನಡೆಸುತ್ತಿದ್ದ ಬಿಜೆಪಿಗೆ ಜಾರ್ಖಂಡ್‍ನಲ್ಲೂ ಮುಖಭಂಗವಾಗಿದೆ. 47 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಏರಲಿದೆ.

ಮಹಾರಾಷ್ಟ್ರದಲ್ಲಿ ಹಲವು ರಾಜಕೀಯ ಬೆಳವಣಿಗೆಗಳ ನಡುವೆಯೂ ಅಧಿಕಾರ ಪಡೆಯಲು ವಿಫಲವಾದ ಬಿಜೆಪಿ, ಜಾರ್ಖಂಡ್‍ನಲ್ಲೂ ನಿರಾಸೆ ಅನುಭವಿಸಿದೆ. ಸದ್ಯದ ಮಾಹಿತಿ ಅನ್ವಯ ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ) 31, ಕಾಂಗ್ರೆಸ್ 15, ಆರ್ ಜೆಡಿ 1 ಮೈತ್ರಿಕೂಟ 47 ಸ್ಥಾನಗಳನ್ನು ಪಡೆದು ಭಾರೀ ವಿಜಯವನ್ನು ಸಾಧಿಸಿದೆ. ಇತ್ತ ಬಿಜೆಪಿ 25 ಸ್ಥಾನ ಪಡೆದು 2ನೇ ಸ್ಥಾನದಲ್ಲಿದ್ದರೆ, ಜೆವಿಎಂ (ಜಾರ್ಖಂಡ್ ವಿಕಾಸ್ ಮೋರ್ಚಾ) 3, ಇತರರು 6 ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಒಟ್ಟು 81 ಸ್ಥಾನಗಳಿರುವ ಜಾರ್ಖಂಡ್ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಬೇಕಾದ 42 ಸ್ಥಾನಗಳು ಕಾಂಗ್ರೆಸ್ ಮೈತ್ರಿಕೂಟಕ್ಕೆ ಲಭಿಸಿದೆ.

ಸದ್ಯ ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ಲಭ್ಯವಾಗಿರುವುದರಿಂದ ಜೆಎಂಎಂ ಪಕ್ಷ ಮುಖ್ಯಸ್ಥ ಹೇಮಂತ್ ಸೊರೆನ್ ಸಿಎಂ ಆಗಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜೆಎಂಎಂ, ಕಾಂಗ್ರೆಸ್ ಮತ್ತು ಆರ್‍ಜೆಡಿ ಪಕ್ಷಗಳು ಮೈತ್ರಿಕೂಟ ನಡೆಸಿ ಚುನಾವಣೆ ಎದುರಿಸಿದ್ದವು. ಈ ಮೈತ್ರಿ ಸದ್ಯ ಯಶಸ್ವಿಯಾಗಿದ್ದು, ಚುನಾವಣೆಯ ಸಂದರ್ಭದಲ್ಲಿ ಸಿಎಂ ಅಭ್ಯರ್ಥಿ ಎಂದೇ ಬಿಂಬಿಸಲಾಗಿದ್ದ ಹೇಮಂತ್ ಸದ್ಯ 2ನೇ ಅವಧಿಗೆ ಸಿಎಂ ಆಗಲಿದ್ದಾರೆ. ಈ ಹಿಂದೆ 2012 ರಲ್ಲಿ 14 ತಿಂಗಳ ಕಾಲ ಹೇಮಂತ್ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು.

ಈ ಕುರಿತು ಎನ್‍ಸಿಪಿ ಹಾಗೂ ಶಿವಸೇನೆ ಪಕ್ಷಗಳು ಪ್ರತಿಕ್ರಿಯೆ ನೀಡಿದ್ದು, ಈ ಫಲಿತಾಂಶ ಬಿಜೆಪಿಗೆ ಹಿನ್ನಡೆಯಾಗಿದೆ. ಮೈತ್ರಿಕೂಟಕ್ಕೆ ಹೆಚ್ಚಿನ ಬಲ ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. 2014ರ ಚುನಾವಣೆಯ ಫಲಿತಾಂಶವನ್ನು ಗಮನಿಸುವುದಾದರೆ, ಕಾಂಗ್ರೆಸ್-ಜೆಎಂಎಂ ಮೈತ್ರಿಕೂಟ 25, ಬಿಜೆಪಿ 37, ಜೆವಿಎಂ 8, ಎಜೆಸ್‍ಯು 5 ಮತ್ತು ಇತರೇ 6 ಸ್ಥಾನಗಳನ್ನು ಗೆದ್ದುಕೊಂಡಿತ್ತು.

Click to comment

Leave a Reply

Your email address will not be published. Required fields are marked *