ಇಡಿ ಭರ್ಜರಿ ಬೇಟೆ – 13 ಕಡೆ ದಾಳಿ, 32 ಕೋಟಿ ಮೌಲ್ಯದ ವಜ್ರಖಚಿತ ಆಭರಣ, ನಗದು ಜಪ್ತಿ

Public TV
2 Min Read
ED Raid

ಮುಂಬೈ: ಹೈದರಾಬಾದ್‌ ಹಾಗೂ ಮುಂಬೈನ (Mumbai and Hyderabad) 13 ಸ್ಥಳಗಳಲ್ಲಿ ಎರಡು ದಿನಗಳ ಕಾಲ ನಡೆಸಿದ ದಾಳಿಯಲ್ಲಿ ಒಟ್ಟು 31 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ಜಾರಿ ನಿರ್ದೇಶನಾಲಯ (Enforcement Directorate) ಜಪ್ತಿ ಮಾಡಿದೆ.

2009ರಿಂದ ವಸಾಯಿ ವಿರಾರ್ ಮುನ್ಸಿಪಲ್ ಕಾರ್ಪೊರೇಷನ್‌ (VVMC) ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಡಗಳನ್ನ ನಿರ್ಮಿಸಿ ಭಾರೀ ಅಕ್ರಮ ನಡೆಸಿರುವ ಆರೋಪದ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ 9.04 ಕೋಟಿ ರೂ. ನಗದು ಮತ್ತು 23.25 ಕೋಟಿ ರೂ. ಮೌಲ್ಯದ ವಜ್ರಖಚಿತ ಆಭರಣಳು ಹಾಗೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ವಿವಿಎಂಸಿಯ ಉಪ ನಿರ್ದೇಶಕ (ಪಟ್ಟಣ ಯೋಜನೆ) ವೈ.ಎಸ್ ರೆಡ್ಡಿ ಅವರ ಮನೆಯಿಂದಲೇ ಬಹುಪಾಲು ಆಭರಣ, ನಗದು ಜಪ್ತಿಯಾಗಿದೆ ಎಂದು ವರದಿಗಳು ತಿಳಿಸಿವೆ.

ED Enforcement Directorate

ವಸೈ ವಿರಾರ್ ನಗರದಲ್ಲಿ ʻಕೊಳಚೆನೀರಿನ ಸಂಸ್ಕರಣಾ ಘಟಕʼ ಮತ್ತು ʻಡಂಪಿಂಗ್ ಗ್ರೌಂಡ್‌ʼ (Dumping Ground) ನಿರ್ಮಾಣಕ್ಕಾಗಿ ಭೂಮಿಯನ್ನ ಕಾಯ್ದಿರಿಸಲಾಗಿತ್ತು. ಆದ್ರೆ ಕಾಲಕ್ರಮೇಣ 41 ಕಟ್ಟಡಗಳನ್ನ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

2009ರಿಂದ ವಿವಿಧ ವಿವಿಎಂಸಿ ಅಧಿಕಾರಿಗಳ ಸಹಕಾರದೊಂದಿಗೆ ಈ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಲು ಭಾರೀ ಅಕ್ರಮ ನಡೆದಿದೆ. ದಾಳಿ ಸಂದರ್ಭದಲ್ಲಿ ಇದಕ್ಕೆ ಪೂರಕವಾದ ದಾಖಲೆಗಳು ಪತ್ತೆಯಾಗಿವೆ. ಆರೋಪಿ ಬಿಲ್ಡರ್‌ಗಳು ಮತ್ತು ಡೆವಲಪರ್‌ಗಳು ಅಕ್ರಮ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಸಾರ್ವಜನಿಕರನ್ನು ವಂಚಿಸಿದ್ದಾರೆ. ನಂತರ ಸರ್ಕಾರಿ ದಾಖಲೆಗಳನ್ನು ನಕಲು ಮಾಡಿ ಮನೆಗಳನ್ನು ಜನರಿಗೆ ಮಾರಾಟ ಮಾಡಿದ್ದಾರೆ. ಅಪಾರ್ಟ್ಮೆಂಟ್‌ಗಳಲ್ಲಿ ಫ್ಲಾಟ್‌ ಖರೀದಿಸುವಂತೆ ಜನರನ್ನ ದಾರಿ ತಪ್ಪಿಸಿದ್ದಾರೆ ಎಂದು ಇಡಿ ತನಿಖಾ ವರದಿಯಲ್ಲಿ ತಿಳಿಸಿದೆ.

ಈ ಕುರಿತು ಬಿಲ್ಡರ್‌ಗಳು, ಸ್ಥಳೀಯ ಸಹಾಯಕರು ಮತ್ತು ಇತರರ ವಿರುದ್ಧ ಮೀರಾ ಭಯಾಂದರ್ ಪೊಲೀಸ್ ಆಯುಕ್ತರು ದಾಖಲಿಸಿದ ಬಹು ಎಫ್‌ಐಆರ್‌ಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ಪ್ರಾರಂಭಿಸಿದೆ.

2 ದಿನ 13 ಸ್ಥಳಗಳಲ್ಲಿ ದಾಳಿ:
ಮುಂಬೈ ವಲಯ ಕಚೇರಿಯ ಜಾರಿ ನಿರ್ದೇಶನಾಲಯವು ಇದೇ ಮೇ 14, 15ರಂದು ಮುಂಬೈ ಮತ್ತು ಹೈದರಾಬಾದ್‌ನಾದ್ಯಂತ 13 ವಿಭಿನ್ನ ಸ್ಥಳಗಳಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿತ್ತು. ಶೋಧ ಕಾರ್ಯಾಚರಣೆಯಲ್ಲಿ 9.04 ಕೋಟಿ ರೂ. (ಅಂದಾಜು) ನಗದು ಮತ್ತು 23.25 ಕೋಟಿ ರೂ. ಮೌಲ್ಯದ ವಜ್ರಖಚಿತ ಆಭರಣ, ಬೆಳ್ಳಿ ಹಾಗೂ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.

Share This Article